2008ರಲ್ಲಿ ನಡೆದ ಮುಂಬೈ ದಾಳಿಗೂ ಮುನ್ನ ಪಾಕ್ ಮೂಲದ ಅಮೆರಿಕನ್ ಉಗ್ರಗಾಮಿ ಡೇವಿಡ್ ಕೋಲ್ಮನ್ ಹೆಡ್ಲಿ, ಭಾರತದ ಅಣುಸ್ಥಾವರವೊಂದಕ್ಕೆ ಭೇಟಿ ನೀಡಿದ್ದ ಅಂಶವನ್ನು ಕೋರ್ಟ್ ದಾಖಲೆಗಳು ಬಹಿರಂಗಪಡಿಸಿವೆ.
26/11 ದಾಳಿ ಪ್ರಕರಣದ ಹಿನ್ನೆಲೆಯಲ್ಲಿ ಬಂಧಿತನಾಗಿ ಶಿಕಾಗೋ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿರುವ ಪಾಕ್ ಮೂಲದ ಕೆನಡಿಯನ್ ತಹಾವುರ್ ರಾಣಾ ವಿರುದ್ಧ ಸಾಕ್ಷಿದಾರನಾಗಿ ಪರಿವರ್ತನೆಗೊಂಡಿರುವ ಹೆಡ್ಲಿ, ಬುಧವಾರ ಕೋರ್ಟಿನಲ್ಲಿ ಈ ಹೇಳಿಕೆ ದಾಖಲಿಸಿದ್ದಾನೆ.
ಪಾಕಿಸ್ತಾನದ ಲಷ್ಕರ್ ಇ ತೊಯ್ಬಾ ಸಂಘಟನೆ ಜೊತೆಗೆ ತಾಲೀಮು ನಡೆಸುತ್ತಿದ್ದ ವೇಳೆ ತಾನು ಅಮೆರಿಕದ ಮಾದಕ ದ್ರವ್ಯ ಇಲಾಖೆಯ ಮಾಹಿತಿದಾರ ಎಂದು ಅಧಿಕೃತವಾಗಿ ಬಿಂಬಿಸಿಕೊಂಡಿದ್ದಾಗಿ ತಿಳಿಸಿದ್ದಾನೆ.
2008ರಲ್ಲಿ ನಡೆದ ಮುಂಬೈ ದಾಳಿಗೂ ಮುನ್ನ ಐಎಸ್‌ಐ ಅಧಿಕಾರಿ ಮೇಜರ್ ಇಕ್ಬಾಲ್ ನಿರ್ದೇಶನದ ಮೇರೆಗೆ ಭಾರತದ ಅಣುಸ್ಥಾವರವೊಂದಕ್ಕೆ ಭೇಟಿ ನೀಡಿದ್ದೆ. ಭಾರತದಲ್ಲಿ ಕಾರ್ಯಾಚರಣೆ ನಡೆಸಲು ಇಕ್ಬಾಲ್ ತನಗೆ ಭಾರತೀಯ ಕರೆನ್ಸಿ ನೀಡಿದ್ದ ಎಂದು ಡೇವಿಡ್ ಕೋಲ್ಮನ್ ಹೆಡ್ಲಿ ಎಂಬುದಾಗಿ ಹೆಸರು ಬದಲಾಯಿಸಿಕೊಂಡಿರುವ ಪಾಕ್ ಸಂಜಾತ ದಾವೂದ್ ಗಿಲಾನಿ ತಿಳಿಸಿದ್ದಾನೆ.
ಏಪ್ರಿಲ್ 2008ರಲ್ಲಿ ಮುಂಬೈಗೆ ಪುನಃ ಭೇಟಿ ನೀಡಿದ್ದ ಹೆಡ್ಲಿ, ದಾಳಿ ನಡೆಸುವ ಸ್ಥಳಗಳ ಸರ್ವೇ ಮಾಡಿದ್ದ. ಜಿಪಿಎಸ್ ಬಳಸುವ ಮುಂಬೈ ಬಂದರನ್ನು ಬೋಟೊಂದಲ್ಲಿ ಸುತ್ತು ಹಾಕಿ ವೀಡಿಯೊ ಚಿತ್ರೀಕರಿಸಿದ್ದ ಎಂದು ನ್ಯಾಯಾಲಯದಲ್ಲಿರುವ 57 ಪುಟಗಳ ದಾಖಲೆಯಲ್ಲಿ ಹೇಳಲಾಗಿದೆ.
ಛತ್ರಪತಿ ಶಿವಾಜಿ ಟರ್ಮಿನಸ್ ರೈಲು ನಿಲ್ದಾಣದ ಬಗ್ಗೆಯೂ ಹೆಡ್ಲಿ ಸರ್ವೇ ಮಾಡಿದ್ದ, ಇದರೊಂದಿಗೆ ಮೇಜರ್ ಇಕ್ಬಾಲ್ ನಿರ್ದೇಶನದ ಮೇರೆಗೆ ಸರ್ವೇ ಮಾಡಲು ಭಾರತದ ಅಣು ಸ್ಥಾವರಕ್ಕೂ ಭೇಟಿ ನೀಡಿದ್ದ.
'ಛತ್ರಪತಿ ಶಿವಾಜಿ ರೈಲ್ವೆ ನಿಲ್ದಾಣ, ಮುಂಬೈ ಬಂದರು ಹಾಗೂ ಅಣುಸ್ಥಾವರಕ್ಕೆ ಭೇಟಿ ನೀಡಿದ ನಂತರ ಪಾಕಿಸ್ತಾನಕ್ಕೆ ಮರಳಿದ ಹೆಡ್ಲಿ, ಲಷ್ಕರ್ ಸಂಘಟನೆಯ ಝಾಕಿ, ಸಾಜಿದ್, ಅಬು ಕ್ವಹಾಫಾ ಹಾಗೂ ಇನ್ನೊಬ್ಬ ಸದಸ್ಯನನ್ನು ಭೇಟಿ ಮಾಡಿದ್ದ' ಎಂದು ಈ ದಾಖಲೆ ತಿಳಿಸಿದೆ. ಆತ ಯಾವ ಅಣುಸ್ಥಾವರಕ್ಕೆ ಭೇಟಿ ನೀಡಿದ್ದ ಎಂಬುದು ತಿಳಿದು ಬಂದಿಲ್ಲ.
ಹೆಡ್ಲಿ ಮಾಡಿದ್ದ ವೀಡಿಯೋ ಡೌನ್‌ಲೋಡ್ ಮಾಡಿಕೊಂಡಿದ್ದ ಅಬು ಕ್ವಹಾಫಾ, ಗೂಗಲ್ ಅರ್ಥ್ ಬಳಸಿ ದಾಳಿ ನಡೆಸಲಿರುವ ಸ್ಥಳಗಳನ್ನು ನೋಡಿದ್ದ. ಮುಂಬೈ ತೀರದಲ್ಲಿರುವ ಸಣ್ಣ ಮೀನುಗಾರರ ಕೊಲ್ಲಿಯಲ್ಲಿ ದಾಳಿಕೋರರು ಇಳಿಯಬೇಕು ಎಂದು ಆತ ಶಿಫಾರಸು ಮಾಡಿದ್ದ.
ಮೇಜರ್ ಇಕ್ಬಾಲ್‌ನನ್ನು ಭೇಟಿ ಮಾಡಿದ ಹೆಡ್ಲಿ, ತಾನು ಭಾರತದಲ್ಲಿ ಸರ್ವೆ ನಡೆಸಿ ಕುರಿತು ಮಾಹಿತಿ ಹಾಗೂ ವೀಡಿಯೋ ಚಿತ್ರೀಕರಣದ ಪ್ರತಿಯನ್ನೂ ನೀಡಿದ್ದ. ಆನಂತರ ಲಷ್ಕರ್ ಉಗ್ರಗಾಮಿ ಸಂಘಟನೆಯೊಂದಿಗೆ ದಾಳಿಯ ಕುರಿತು ರೂಪಿಸಿದ ಯೋಜನೆ ಹಾಗೂ ಸಿದ್ಧತೆಯ ಬಗ್ಗೆ ಇಕ್ಬಾಲ್‌ಗೆ ಮಾಹಿತಿ ನೀಡಿದ್ದ ಎಂದು ದಾಖಲೆಗಳಲ್ಲಿ ತಿಳಿಸಲಾಗಿದೆ.