ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮುಂಬೈ ಉಗ್ರರಿಗೆ ನೆರವಾಗಿದ್ದು 'ಬ್ರೇಕಿಂಗ್ ನ್ಯೂಸ್': ಹೆಡ್ಲಿ (Lashkar-e-Taiba | David Coleman Headley | Mumbai terror attack | Live tv)
ಮುಂಬೈ ಮೇಲಿನ ದಾಳಿ ಸಂದರ್ಭದಲ್ಲಿ ಟಿವಿ ಚಾನೆಲ್‌ಗಳ 'ಬ್ರೇಕಿಂಗ್ ನ್ಯೂಸ್' ಪೈಪೋಟಿಯು ದೇಶದ ಭದ್ರತೆಗೇ ಮಾರಕವಾಗಿತ್ತು ಎಂಬ ವಾದಗಳಿಗೆ ಪುಷ್ಟಿ ದೊರೆತಿದೆ. 26/11 ದಾಳಿ ಸಂದರ್ಭದಲ್ಲಿ ಮುಂಬೈಯಲ್ಲಿದ್ದ ಉಗ್ರಗಾಮಿಗಳಿಗೆ ಲಷ್ಕರ್ ಇ ತೋಯ್ಬಾ ಉಗ್ರಗಾಮಿ ಸಂಘಟನೆಯ ಮುಖಂಡರು ಪಾಕಿಸ್ತಾನದಲ್ಲಿ ಕುಳಿತು ಟಿವಿಯನ್ನು ನೋಡಿಕೊಂಡೇ ಸೂಚನೆಗಳನ್ನು ರವಾನಿಸುತ್ತಿದ್ದರು ಎಂದು ಪಾಕ್ ಮೂಲದ ಅಮೆರಿಕನ್ ಉಗ್ರಗಾಮಿ ಡೇವಿಡ್ ಕೋಲ್ಮನ್ ಹೆಡ್ಲಿ ಬಹಿರಂಗಪಡಿಸಿದ್ದಾನೆ.

ಮುಂಬೈ ದಾಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ಶಿಕಾಗೋ ನ್ಯಾಯಾಲಯದಲ್ಲಿ ತಹಾವುರ್ ರಾಣಾ ವಿರುದ್ಧ ಸಾಕ್ಷ್ಯ ನುಡಿಯುತ್ತಿರುವ ಸಂದರ್ಭದಲ್ಲಿ ಹೆಡ್ಲಿ ಈ ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದ್ದಾನೆ.

ಮುಂಬೈ ದಾಳಿ ಸಂದರ್ಭದಲ್ಲಿ ಉಗ್ರರ ವಿರುದ್ಧ ಭಾರತೀಯ ಕಮಾಂಡೋಗಳು ಪ್ರತಿದಾಳಿ ನಡೆಸುತ್ತಿದ್ದುದನ್ನು ರಾಷ್ಟ್ರೀಯ ಹಾಗೂ ಖಾಸಗಿ ವಾಹಿನಿಗಳು ಪೈಪೋಟಿಯ ಮೇಲೆ ನೇರ ಪ್ರಸಾರ ಮಾಡಿದ್ದವು. ವರದಿಗಾರರೇನೋ ಬ್ರೇಕಿಂಗ್‌ ನ್ಯೂಸ್‌ ಕೊಡುವ ಧಾವಂತದಲ್ಲಿ ತಾಜ್‌ ಹೋಟೆಲ್‌ ಹೊರಗೆ ಜೀವದ ಹಂಗು ತೊರೆದು ವರದಿ ಮಾಡಿದರು. ಆದರೆ ಈ ಲೈವ್‌ ಟೆಲಿಕಾಸ್ಟ್‌ ಹಲವು ಜೀವಗಳಿಗೆ ಮುಳುವಾಗುತ್ತಿತ್ತು ಎಂಬ ಅಂಶವು ಅವರಿಗೆ ಗೊತ್ತಿರಲಾರದು.

ಉಗ್ರರ ದಾಳಿಯ ಯಶಸ್ಸಿನಲ್ಲಿ ಟಿವಿ ಚಾನಲ್‌ಗಳ ಪಾತ್ರವೂ ಇತ್ತೆಂಬ ಅಂಶವು ಆತಂಕ ಹುಟ್ಟಿಸಿದೆ. ಸುಮಾರು 60 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಮುಂಬೈ ದಾಳಿಯ ದೃಶ್ಯ ಟಿವಿ ಚಾನಲ್‌ಗಳಲ್ಲಿ ನೇರ ಪ್ರಸಾರವಾಗುತ್ತಿದ್ದುದು ಲಷ್ಕರ್ ಉಗ್ರಗಾಮಿ ಸಂಘಟನೆಯ ಮುಖಂಡರಿಗೆ ವರದಾನವಾಯಿತು. ಲಾಹೋರ್‌ನಲ್ಲಿ ಟಿವಿ ನೋಡಿಯೇ ಅವರು ದಾಳಿ ಕೋರರಿಗೆ ದೂರವಾಣಿ ಮೂಲಕ ನಿರ್ದೇಶನ ನೀಡುತ್ತಿದ್ದರು ಎಂದು ಹೆಡ್ಲಿ ಹೇಳಿದ್ದಾನೆ.

ಮುಂಬೈ ದಾಳಿಯ ವೇಳೆ ಕರಾಚಿಯಲ್ಲಿದ್ದ ಲಷ್ಕರ್ ಮುಖಂಡ ಸಾಜಿದ್‌ ಮಿರ್‌, ಟಿವಿಯಲ್ಲಿ ಬರುತ್ತಿದ್ದ ನೇರ ಪ್ರಸಾರವನ್ನು ಗಮನಿಸಿಯೇ ದಾಳಿ ಕೋರರಿಗೆ ನಿರ್ದೇಶನ ನೀಡುತ್ತಿದ್ದ. ಚಾಬಾದ್‌ ಹೌಸ್‌ ದಾಳಿಗಾಗಿ ತಹಾವುರ್ ರಾಣಾನ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿದ ಸಾಜಿದ್‌ ಮಿರ್, ರಾಣಾನನ್ನು ಖಿಲಾದ್‌ ಬಿನ್‌ ವಾಲಿದ್‌ (ಇತಿಹಾಸದ ಶ್ರೇಷ್ಠ ಸೇನಾನಿ) ಎಂದು ಕರೆದಿದ್ದ ಎಂದು ಹೆಡ್ಲಿ ಹೇಳಿದ್ದಾನೆ.

ಮೆಟ್ಟಿಲಿಳಿದು ಒಳಗೆ ಬರುತ್ತಿದ್ದ ವಿಶೇಷ ಪಡೆಯ ಸೈನಿಕರ ಮೇಲೆ ಹಾಸಿಗೆ ಎಸೆದು ದಾಳಿ ನಡೆಸುವಂತೆ ಚಾಬಾದ್‌ ಹೌಸ್‌ನಲ್ಲಿ ದಾಳಿ ನಡೆಸುತ್ತಿದ್ದ ಇಬ್ಬರು ಉಗ್ರರಿಗೆ ಸಾಜಿದ್‌ ಮಿರ್ ಸೂಚನೆ ನೀಡಿದ್ದ. ಈ ಸಂದರ್ಭದಲ್ಲಿ ಉಗ್ರರು 6 ಜನರನ್ನು ಹತ್ಯೆ ಮಾಡಿದ್ದರು ಎಂದು ಹೆಡ್ಲಿ ತಿಳಿಸಿದ್ದಾನೆ.

ಈ ಘಟನೆ ಆದ ಬಳಿಕ, ಭಾರತೀಯ ಸುದ್ದಿ ಪ್ರಸಾರಕರ ಒಕ್ಕೂಟವು, ಇಂತಹಾ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಘಟನೆಗಳಲ್ಲಿ ನೇರ ಪ್ರಸಾರದ ಮೇಲೆ ಸ್ವಯಂ ನಿಯಂತ್ರಣ ಹೇರುವ ಬಗ್ಗೆ ಎಲ್ಲ ಚಾನೆಲ್‌ಗಳಿಗೂ ಸೂಚನೆ ರವಾನಿಸಿತ್ತು. ಆದರೆ, ಅಷ್ಟರಲ್ಲಾಗಲೇ 168 ಜೀವಹಾನಿಯಾಗಿಬಿಟ್ಟಿತ್ತು.
ಇವನ್ನೂ ಓದಿ