ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಲಿಬಿಯಾ: ಗಡಾಫಿಗೆ ಹತ್ಯೆ ಭಯ-ಪ್ರತಿ ರಾತ್ರಿ ಸ್ಥಳ ಬದಲಾವಣೆ (Colonel Muammar Gaddafi | David Cameron | assassination fears | Libya)
ಲಿಬಿಯಾ: ಗಡಾಫಿಗೆ ಹತ್ಯೆ ಭಯ-ಪ್ರತಿ ರಾತ್ರಿ ಸ್ಥಳ ಬದಲಾವಣೆ
ಲಂಡನ್, ಶುಕ್ರವಾರ, 27 ಮೇ 2011( 15:52 IST )
ನ್ಯಾಟೋ ದಾಳಿಯಿಂದ ಹಾಗೂ ತನ್ನನ್ನು ಹತ್ಯೆಗೈಯಬಹುದು ಎಂಬ ಸಂಶಯ ಪಿಶಾಚಿಯಾಗಿರುವ ಲಿಬಿಯಾ ಸರ್ವಾಧಿಕಾರಿ ಕರ್ನಲ್ ಮುಅಮ್ಮರ್ ಗಡಾಫಿ ಪ್ರತಿ ರಾತ್ರಿ ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಪರಾರಿಯಾಗಿ ಅಡಗಿಕೊಳ್ಳುತ್ತಿದ್ದಾನೆ ಎಂದು ಮಾಧ್ಯಮದ ವರದಿಯೊಂದು ತಿಳಿಸಿದೆ.
ಗಡಾಫಿ ತಲೆಮರೆಸಿಕೊಂಡಿರುವುದಾಗಿ ಗುಪ್ತಚರ ಇಲಾಖೆ ಮಾಹಿತಿ ನೀಡಿದ ನಂತರ ಕಳೆದ ರಾತ್ರಿ ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್,ಲಿಬಿಯಾದಲ್ಲಿ ದಾಳಿ ನಡೆಸಲು ನಾಲ್ಕು ಹೆಲಿಕಾಪ್ಟರ್‌ಗಳಿಗೆ ಅನುಮತಿ ನೀಡಿದ್ದರು.
ಕಳೆದ ವಾರ ಬ್ರಿಟನ್, ಅಮೆರಿಕ ಮತ್ತು ಫ್ರಾನ್ಸ್ ಗುಪ್ತಚರ ಇಲಾಖೆ ವಿಷಯ ವಿನಿಮಯದ ಸಂದರ್ಭದಲ್ಲಿ, ಗಡಾಫಿ ತುಂಬಾ ಸಂಶಯ ಪಿಶಾಚಿಯಾಗಿದ್ದಾನೆ ಮತ್ತು ಆತನನ್ನು ಕೊಲ್ಲುವ ಯತ್ನ ನಡೆಯುತ್ತಿದೆ ಎಂದು ಆತನ ಮಿಲಿಟರಿ ಸದಸ್ಯರು ಮನದಟ್ಟು ಮಾಡಿರುವುದಾಗಿ ದ ಡೈಲಿ ಮೇಲ್ ವರದಿ ಮಾಡಿದೆ.
ಸರ್ವಾಧಿಕಾರಿ ಮುಅಮ್ಮರ್ ಗಡಾಫಿ ಈಗಾಗಲೇ ಎಲ್ಲವನ್ನು ತ್ಯಜಿಸಿ ಬಂಕರ್ ಮತ್ತು ಸುರಕ್ಷತೆಯ ಮನೆಗಳಲ್ಲಿ ಠಿಕಾಣಿ ಹೂಡುತ್ತಿರುವುದಾಗಿ ಟ್ರೈಪೋಲಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿ ಹೇಳಿದೆ.
ಗಡಾಫಿ ಪ್ರತಿ ರಾತ್ರಿ ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಗೊಳ್ಳುತ್ತಿದ್ದಾನೆ. ಹಾಗಾಗಿ ಲಿಬಿಯಾದಲ್ಲಿನ ಬದಲಾವಣೆಯ ಕಾಲ ಸನ್ನಿಹಿತವಾಗಿದೆ ಎಂದು ರಾಜತಾಂತ್ರಿಕ ಮೂಲವೊಂದು ವಿವರಿಸಿದೆ. ಕರ್ನಲ್ ಗಡಾಫಿ ನಮ್ಮ ಗುರಿಯಲ್ಲ ಎಂದು ಬ್ರಿಟನ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.