2007ರಲ್ಲಿ ನಡೆದ ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಹತ್ಯೆಯ ಕುರಿತ ತನಿಖೆಗೆ ಸಹಕರಿಸುವಲ್ಲಿ ವಿಫಲರಾಗಿರುವ ಮಾಜಿ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಅವರು ಘೋಷಿತ ಅಪರಾಧಿ ಎಂದು ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ ಸೋಮವಾರ ಘೋಷಿಸಿದೆ.
ರಾವಲ್ಪಿಂಡಿಯಲ್ಲಿರುವ ಭಯೋತ್ಪಾದನಾ ನಿಗ್ರಹ ನ್ಯಾಯಾಲಯದಲ್ಲಿ ಸೋಮವಾರ ವಿಚಾರಣೆ ನಡೆಸಿದ ನ್ಯಾಯಾಧೀಶ ರಾಣಾ ನಾಸಿರ್ ಅಹ್ಮದ್ ಅವರು, ಸ್ವಯಂ ದೇಶಭ್ರಷ್ಟರಾಗಿರುವ ಮುಷರ್ರಫ್ ಘೋಷಿತ ಅಪರಾಧಿ ಎಂದು ಆದೇಶ ನೀಡಿದ್ದು, ಫೆಡರಲ್ ಇನ್ವೆಸ್ಟಿಗೇಶನ್ ಏಜೆನ್ಸಿ ತಲೆಮರೆಸಿಕೊಂಡ ಆರೋಪಿ ಎಂದು ಘೋಷಿಸುವಂತೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಭದ್ರತಾ ಕಾರಣಗಳಿಗಾಗಿ ಅಡಿಯಾಲಾ ಕಾರಾಗೃಹದಲ್ಲಿ ನಡೆದ ವಿಚಾರಣೆ ಸಂದರ್ಭದಲ್ಲಿ ಮುಷರ್ರಫ್ ಅವರಿಗೆ ನ್ಯಾಯಾಲಯ ಜಾರಿಗೊಳಿಸಿದ್ದ ಬಂಧನದ ನೋಟಿಸ್ ನೀಡಲು ಸಾಧ್ಯವಾಗಲಿಲ್ಲ ಎಂದು ಸರಕಾರಿ ವಕೀಲರು ನ್ಯಾಯಾಧೀಶರಿಗೆ ತಿಳಿಸಿದರು.
ಮುಷರ್ರಫ್ ಅವರು 2009ರಿಂದಲೂ ಬ್ರಿಟನ್‌ನಲ್ಲಿ ವಾಸಿಸುತ್ತಿದ್ದು, ಪಾಕಿಸ್ತಾನದೊಂದಿಗೆ ಬ್ರಿಟನ್ ಗಡೀಪಾರು ಒಪ್ಪಂದ ಮಾಡಿಕೊಳ್ಳದೇ ಇರುವುದರಿಂದಾಗಿ ಮುಷರ್ರಫ್ ಅವರಿಗೆ ವಾರೆಂಟ್ ಜಾರಿ ಮಾಡಲು ಯಾವುದೇ ನೆರವು ನೀಡಿಲ್ಲ ಎಂದು ಸರಕಾರಿ ವಕೀಲರು ನ್ಯಾಯಾಧೀಶರಿಗೆ ವಿಚಾರಣೆ ವೇಳೆ ವಿವರಿಸಿದ್ದಾರೆ.
ಆ ಸಂದರ್ಭದಲ್ಲಿ ವಕೀಲರು ಮುಷರ್ರಫ್ ಅವರನ್ನು ಘೋಷಿತ ಅಪರಾಧಿ ಎಂದು ಘೋಷಿಸುವಂತೆ ನ್ಯಾಯಾಧೀಶರಲ್ಲಿ ಮನವಿ ಮಾಡಿಕೊಂಡರು.
ಮುಷರ್ರಫ್ ಅವರ ಸ್ಥಿರಾಸ್ತಿ ಹಾಗೂ ಚರಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಕುರಿತು ಅಧಿಕಾರಿಗಳು ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡಬಹುದು ಎಂದು ನ್ಯಾಯಾಧೀಶರು ತಿಳಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಭುಟ್ಟೋ ಹತ್ಯೆಯ ಕುರಿತು ನಡೆಸಲಾಗುತ್ತಿರುವ ತನಿಖೆಗೆ ಮುಷರ್ರಫ್ ಸಹಕರಿಸಲು ನಿರಾಕರಿಸಿರುವುದರಿಂದಾಗಿ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಭಾಗಿಯಾಗಿರಬಹುದೆಂಬ ಶಂಕಿತ ವ್ಯಕ್ತಿಯೂ ಸೇರಿದಂತೆ ಐವರ ವಿರುದ್ಧ ನಡೆಯುತ್ತಿರುವ ವಿಚಾರಣೆ ಹಲವಾರು ತಿಂಗಳು ಸ್ಥಗಿತವಾಗಿತ್ತು.
ಪರ್ವೇಜ್ ಮುಷರ್ರಫ್ ಅವರು ನೀಡಿದ ಸಂದರ್ಶನವೊಂದು ಸೇರಿದಂತೆ ನ್ಯಾಯಾಲಯಕ್ಕೆ ಮಾಹಿತಿ ನೀಡಿದ ಸರಕಾರಿ ವಕೀಲರು, ಮುಷರ್ರಫ್ ಅವರಿಗೆ ಭುಟ್ಟೋ ಹತ್ಯೆಯ ಕುರಿತು ಪಾಕಿಸ್ತಾನದಲ್ಲಿ ನಡೆಯುತ್ತಿರುವ ವಿಚಾರಣೆ ಕುರಿತು ಅರಿವಿದೆ ಎಂಬುದು ಕಂಡು ಬರುತ್ತಿದೆ ಎಂದು ಹೇಳಿದರು. ಬೆನಜೀರ್ ಭುಟ್ಟೋ ಅವರ ಹತ್ಯೆಯ ಕುರಿತು ತನಿಖೆ ನಡೆಸುತ್ತಿದ್ದ ಅಧಿಕಾರಿಗಳು ಮುಷರ್ರಫ್ ತಲೆ ಮರೆಸಿಕೊಂಡಿದ್ದಾರೆ ಎಂದು ಘೋಷಿಸಿದ ನಂತರ ಮಾಜಿ ಸೇನಾ ಆಡಳಿತಗಾರ ಮುಷರ್ರಫ್ ಅವರು ಭುಟ್ಟೋ ಹತ್ಯೆಯ ಕುರಿತ ವಿಚಾರಣೆಗೆ ಸಹಕರಿಸುತ್ತಿಲ್ಲ ಎಂದು ಹೇಳಿದ್ದರಿಂದ ನ್ಯಾಯಾಲಯವು ಕಳೆದ ಫೆಬ್ರವರಿಯಲ್ಲಿ ಮುಷರ್ರಫ್ ಅವರ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಗೊಳಿಸಿತ್ತು.