ಶೇ.67ರಷ್ಟು ಮಂದಿ ಪಾಕಿಸ್ತಾನಿಯರು ದೇಶವನ್ನು ಇಸ್ಲಾಮೀಕರಣ ಮಾಡಲು ಕ್ರಮ ಕೈಗೊಳ್ಳಬೇಕೆಂದು ಸಮೀಕ್ಷೆಯೊಂದರಲ್ಲಿ ಅಭಿಪ್ರಾಯವ್ಯಕ್ತಪಡಿಸಿದ್ದು, ಇದು ಪರ್ಯಾಯ ವ್ಯವಸ್ಥೆ ಬಗೆಗೆ ನಂಬಿಕೆ ಕಳೆದುಕೊಂಡಿರುವುದರ ಸೂಚನೆ ಎಂಬುದಾಗಿ ಸಮೀಕ್ಷೆ ತಿಳಿಸಿದೆ.
ಗಿಲಾನಿ ರಿಸರ್ಚ್ ಫೌಂಡೇಶನ್ ಈ ಸಮೀಕ್ಷೆಯನ್ನು ನಡೆಸಿದ್ದು, ಶೇ.31ರಷ್ಟು ಜನರು ಇಸ್ಲಾಮೀಕರಣದ ಕುರಿತು ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರೆ, ಶೇ.48ರಷ್ಟು ಮಂದಿ ಈ ಬಗ್ಗೆ ಒಂದೊಂದಾಗಿಯೇ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಸಮಾಜವನ್ನು ಇಸ್ಲಾಮೀಕರಣ ಮಾಡಲು ಸರಕಾರ ಕ್ರಮ ಕೈಗೊಳ್ಳಬೇಕೆ? ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂಬುದಾಗಿ ಸಮೀಕ್ಷೆಯಲ್ಲಿ ಜನರನ್ನು ಪ್ರಶ್ನಿಸಲಾಗಿತ್ತು.
ಆ ನಿಟ್ಟಿನಲ್ಲಿ ಪಾಕಿಸ್ತಾನ ಜಾತ್ಯಾತೀತ ರಾಷ್ಟ್ರವಾಗಬೇಕೆಂದು ಕೇಳಿಬರುತ್ತಿರುವ ಅಭಿಪ್ರಾಯ ಸಂಪೂರ್ಣ ಆಧಾರರಹಿತ ಎಂಬುದನ್ನು ಇದು ಸೂಚಿಸುತ್ತದೆ. ಅಲ್ಲದೇ ಈಗಿರುವ ವ್ಯವಸ್ಥೆಯ ವಿರುದ್ಧವಾಗಿಯೇ ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವುದಾಗಿ ದಿ ನೇಷನ್ ವರದಿ ಮಾಡಿದೆ.
ಇದೊಂದು ವೈಶಿಷ್ಟ್ಯಪೂರ್ಣವಾದ ಸಮೀಕ್ಷೆಯಾಗಿದ್ದು, ಇದನ್ನು ಪಾಕಿಸ್ತಾನದ ಗ್ಯಾಲ್ಲುಪ್ ಸಂಘಟನೆ ಮೂಲಕ ಕೈಗೊಳ್ಳಲಾಗಿದೆ. ಸಮಾಜದಲ್ಲಿ ಶೇ.90ರಷ್ಟು ಮುಸ್ಲಿಮ್ ಸಮುದಾಯದ ಜನರೇ ಇದ್ದು, ಅವರು ತಮ್ಮ ಅಭಿಪ್ರಾಯವನ್ನು ನೇರವಾಗಿ ತಿಳಿಸಿರುವುದಾಗಿ ಸಮೀಕ್ಷೆ ವಿವರಿಸಿದೆ.
ಶೇ.13ರಷ್ಟು ಜನರು ಮಾತ್ರ ದೇಶವನ್ನು ಇಸ್ಲಾಮೀಕರಣ ಮಾಡಬೇಕಾದ ಅಗತ್ಯವಿಲ್ಲ ಎಂದು ತಮ್ಮ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಇದರಲ್ಲಿ ಜಾತ್ಯತೀತವಾದಿಗಳು, ಅಲ್ಪಸಂಖ್ಯಾತ ಸಮುದಾಯದವರು ಸೇರಿದ್ದಾರೆ. ಶೇ.20ರಷ್ಟು ಮಂದಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅವರಿಗೆ ಇಸ್ಲಾಮೀಕರಣ ಮುಖ್ಯವಾದ ವಿಷಯವಲ್ಲ ಎಂದು ತಿಳಿಸಿದ್ದಾರಂತೆ.