ಪಾಕಿಸ್ತಾನದ ಐಎಸ್ಐ ಕೃಪಾಕಟಾಕ್ಷ, ತರಬೇತಿ, ದಾಳಿ ಹೀಗೆ ಒಂದೊಂದೇ ವಿಷಯವನ್ನು ಮುಂಬೈ ದಾಳಿ ಪ್ರಕರಣದ ಆರೋಪಿ ಡೇವಿಡ್ ಕೋಲ್ಮನ್ ಹೆಡ್ಲಿ ವಿಶ್ವಾಸಾರ್ಹ ವ್ಯಕ್ತಿಯಲ್ಲ. ಆತ ಒಬ್ಬ ಅಪರಾಧಿ. ಆದ್ದರಿಂದ ಅವನ ಮಾತುಗಳನ್ನು ನಂಬುವಂತಿಲ್ಲ ಎಂದು ಪಾಕಿಸ್ತಾನದ ಒಳಾಡಳಿತ ಸಚಿವ ರೆಹಮಾಮ್ ಮಲಿಕ್ ತಿಳಿಸಿದ್ದಾರೆ.
ಅಮೆರಿಕದ ವಶದಲ್ಲಿರುವ ಹೆಡ್ಲಿ, ಮುಂಬೈ ದಾಳಿಗೆ ಐಎಸ್ಐ ಹೊಣೆ ಎಂದು ವಿಚಾರಣೆ ವೇಳೆ ಬಾಯ್ಬಿಟ್ಟು ಸುಮಾರು ಒಂದು ವಾರ ಕಳೆದರೂ ಯಾವುದೇ ಹೇಳಿಕೆ ನೀಡದೆ ತೆಪ್ಪಗಿದ್ದ ಪಾಕಿಸ್ತಾನ ಇದೇ ಮೊದಲ ಬಾರಿಗೆ ಈ ಪ್ರತಿಕ್ರಿಯೆ ನೀಡಿದೆ.
ಹೆಡ್ಲಿ ತನ್ನ ಹೇಳಿಕೆಗಳ ಬಗ್ಗೆ ನ್ಯಾಯಾಲಯದಲ್ಲಿ ವಿಶ್ವಾಸಾರ್ಹವಾದ ಸಾಕ್ಷ್ಯಗಳನ್ನು ಒದಗಿಸಬೇಕಾದ ಅಗತ್ಯವಿದೆ ಎಂದು ನ್ಯೂಸ್ ವೀಕ್ ನಿಯತಕಾಲಿಕಕ್ಕೆ ನೀಡಿರುವ ಸಂದರ್ಶನದಲ್ಲಿ ಮಲಿಕ್ ಹೇಳಿದ್ದಾರೆ.
ಮುಂಬೈನಲ್ಲಿ ದಾಳಿ ನಡೆಯುವ ಮುನ್ನ ಗುರುತಿಸಲು ತನಗೆ ಐಎಸ್ಐನ ಮೇಜರ್ ನಿರ್ದೇಶನ ನೀಡಿದ್ದರು ಎಂಬ ಹೆಡ್ಲಿ ಹೇಳಿಕೆ ಕುರಿತು ಸುದ್ದಿಗಾರರು ಗಮನಸೆಳೆದಾಗ, ಈ ಹೇಳಿಕೆ ಬಗ್ಗೆ ಹೆಡ್ಲಿ ಬಳಿ ಸೂಕ್ತ ದಾಖಲಿಗಳಿವೆಯೇ ಎಂದು ಮರು ಪ್ರಶ್ನಿಸಿದರು.
ಮುಂಬೈ ದಾಳಿ ವಿಷಯದಲ್ಲಿ ಪಾಕಿಸ್ತಾನದ ಯಾವುದೇ ಪಾತ್ರವಿಲ್ಲ. ಈ ಬಗ್ಗೆ ಭಾರತಕ್ಕೂ ಅರಿವಿದೆ. ಆದಾಗ್ಯೂ ಈ ಸಂಬಂಧ ಏಳು ಜನರನ್ನು ಪಾಕಿಸ್ತಾನದಲ್ಲಿ ಬಂಧಿಸಲಾಗಿದೆ. ಅವರ ವಿರುದ್ಧ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ ಎಂದರು.