ಆಲ್ಕೋಹಾಲ್ ಕುಡಿದಿರುವುದಕ್ಕೆ ಸ್ವತಃ ನ್ಯಾಯಾಧೀಶರೇ ವ್ಯಕ್ತಿಯೊಬ್ಬನಿಗೆ ಛಾಟಿಯೇಟು ನೀಡಿರುವ ಘಟನೆ ಪೂರ್ವ ಅಫ್ಘಾನಿಸ್ತಾನದಲ್ಲಿ ನಡೆದಿರುವುದಾಗಿ ಬಿಬಿಸಿ ವರದಿ ಮಾಡಿದೆ.
ಪೂರ್ವ ಅಫ್ಘಾನಿಸ್ತಾನದ ನಂಗ್ರಾಹಾರ್ ಪ್ರಾಂತ್ಯದ ಜಲಾಲಾಬಾದ್ ಕೋರ್ಟ್‌ರೂಂನೊಳಗೆ ವ್ಯಕ್ತಿಗೆ ಛಾಟಿಯೇಟು ನೀಡಿರುವುದಾಗಿ ವರದಿ ಹೇಳಿದೆ. ಇಂತಹ ಶಿಕ್ಷೆ ಅಫ್ಘಾನಿಸ್ತಾನ ಸಂವಿಧಾನ ಪ್ರಕಾರ ಕಾನೂನು ಸಮ್ಮತವಾದದ್ದು. ಆದರೆ ಅದನ್ನು ಜಾರಿಗೆ ತರುವುದು ಮಾತ್ರ ತುಂಬಾ ವಿರಳ.
ಈ ಘಟನೆ ಬಗ್ಗೆ ಅಫ್ಘಾನಿಸ್ತಾನದ ಮಾನವ ಹಕ್ಕು ಆಯೋಗ ಕಳವಳ ವ್ಯಕ್ತಪಡಿಸಿದೆ. ಆದರೆ ಈ ಛಾಟಿಯೇಟು ನೀಡಿರುವ ಘಟನೆ ಯಾವಾಗ ನಡೆಯಿತು ಎಂಬುದು ಖಚಿತವಿಲ್ಲ. ಬಹುತೇಕ ಇದು ಕಳೆದ ವಾರ ನಡೆದಿರಬೇಕೆಂದು ಶಂಕಿಸಲಾಗಿದೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಬಹಿರಂಗವಾಗಿ ಇಂತಹ ಶಿಕ್ಷೆಯನ್ನು ವಿಧಿಸುತ್ತಾರೆ. ಇತ್ತೀಚೆಗಷ್ಟೇ ಜೋಡಿಯೊಂದನ್ನು ಉತ್ತರ ಅಫ್ಘಾನಿಸ್ತಾನದಲ್ಲಿ ಕಲ್ಲು ಹೊಡೆದು ಸಾಯಿಸಿರುವ ಘಟನೆ ನಡೆದಿತ್ತು.