ಮುಂಬೈ ಭಯೋತ್ಪಾದನಾ ದಾಳಿಯ ಸಹ ಆರೋಪಿಯಾಗಿರುವ ತಹಾವ್ವೂರ್ ರಾಣಾ ಪಾಕಿಸ್ತಾನಕ್ಕೆ ವಾಪಸಾಗುವ ಬಗ್ಗೆ ಲಷ್ಕರ್ ಇ ತೊಯ್ಬಾದ ಉಗ್ರ ಡೇವಿಡ್ ಹೆಡ್ಲಿ ಐಎಸ್ಐ ನೆರವು ಕೋರಿದ್ದ ಎಂದು ಎಫ್‌ಬಿಐ ಅಧಿಕಾರಿಗಳು ಕೋರ್ಟ್‌ಗೆ ತಿಳಿಸಿದ್ದಾರೆ.
ರಾಣಾಗೆ ಸಂಬಂಧಿಸಿದಂತೆ ಡೇವಿಡ್ ಹೆಡ್ಲಿ ತನ್ನ ವೈಯಕ್ತಿಕ ಪ್ರಭಾವ ಬೀರಿರುವುದಾಗಿ ಕಳೆದ ಐದು ದಿನಗಳಿಂದ ಮುಂಬೈ ಭಯೋತ್ಪಾದನಾ ಘಟನೆ ಕುರಿತಂತೆ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ಸಂದರ್ಭದಲ್ಲಿ ಎಫ್‌ಬಿಐ ಏಜೆಂಟ್ ಜೆಫ್ರೈ ಪಾರ್ಸ್‌ನ್ಸ್ ವಿವರಿಸಿದರು.
ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಪಾಕಿಸ್ತಾನದ ಐಎಸ್ಐ ಕೈವಾಡ ಇರುವುದಾಗಿ ಈ ಮೊದಲು ವಿಚಾರಣೆ ವೇಳೆ ಡೇವಿಡ್ ಹೆಡ್ಲಿ ತಿಳಿಸಿದ್ದ. ಮುಂಬೈ ದಾಳಿಗೆ ಸಂಬಂಧಿಸಿದಂತೆ ಚಿಕಾಗೋ ಕೋರ್ಟ್‌ನಲ್ಲಿ ಮೇ 16ರಿಂದ ವಿಚಾರಣೆ ಆರಂಭಗೊಂಡಿತ್ತು. ಇದು ಜೂನ್ 15ರವರೆಗೆ ನಡೆಯುವ ಸಾಧ್ಯತೆ ಇದೆ. ಪ್ರಕರಣದಲ್ಲಿ ರಾಣಾ ದೋಷಿ ಎಂದು ಸಾಬೀತಾದರೆ ಜೀವಾವಧಿ ಶಿಕ್ಷೆಗೆ ಒಳಗಾಗಲಿದ್ದಾನೆ.
ಕಾಶ್ಮೀರದ ವಿಚಾರದ ಕುರಿತಂತೆ ಹೆಡ್ಲಿ, ರಾಣಾನ ಜತೆ ತುಂಬಾ ಬಾವುಕನಾಗಿ ಮಾತನಾಡುತ್ತಿದ್ದನಂತೆ. ಅಷ್ಟೇ ಅಲ್ಲ ಕಾಶ್ಮೀರವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಬಗ್ಗೆಯೂ ಆವೇಶದಿಂದ ಮಾತನಾಡುತ್ತಿರುವುದಾಗಿ ರಾಣಾ ತಿಳಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.