ನ್ಯಾಟೋ ಮಿಲಿಟರಿ ಪಡೆ ಹಗಲು ಹೊತ್ತಿನಲ್ಲಿಯೂ ಟ್ರೈಪೋಲಿಯಲ್ಲಿ ವೈಮಾನಿಕ ದಾಳಿಯನ್ನು ಮುಂದುವರಿಸಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಲಿಬಿಯಾ ಸರ್ವಾಧಿಕಾರಿ ಮುಅಮ್ಮರ್ ಗಡಾಫಿ, ಸಾಯುವವರೆಗೂ ಹೋರಾಟ ನಡೆಸುವುದು ಖಚಿತ ಎಂದು ಶಪಥಗೈದಿದ್ದಾರೆ.
ಲಿಬಿಯಾದ ಸ್ಟೇಟ್ ಟೆಲಿವಿಷನ್‌ಗೆ ದೂರವಾಣಿ ಮೂಲಕ ಆಕ್ರೋಶಭರಿತರಾಗಿ ಗುಡುಗಿರುವ ಅವರು,ಅರಬ್ ದೇಶಗಳಲ್ಲಿನ ಪ್ರತಿಭಟನೆಯಿಂದ ಪ್ರಭಾವಿತರಾಗಿ ಕಳೆದ ಫೆಬ್ರುವರಿ ತಿಂಗಳಿನಿಂದ ಬಂಡುಕೋರರು ನಡೆಸುತ್ತಿರುವ ಹೋರಾಟಕ್ಕೆ ಮಣಿಯುವ ಪ್ರಶ್ನೆಯೇ ಇಲ್ಲ ಸ್ಪಷ್ಟಪಡಿಸಿದ್ದಾರೆ.
'ನಾವು ಶರಣಾಗಲ್ಲ, ನಿಮ್ಮ ಗೊಡ್ಡು ಹೋರಾಟಕ್ಕೆ ಮಂಡಿಯೂರುವ ಪ್ರಶ್ನೆಯೇ ಇಲ್ಲ' ಎಂದು ಗುಡುಗಿರುವ ಗಡಾಫಿ ನಮಗಿರುವ ಆಯ್ಕೆ ಒಂದೇ ಸಾವು ಅಥವಾ ಜಯ ಎಂದಿದ್ದಾರೆ. ನಮಗೆ ಅದು ಮುಖ್ಯವಾದ ವಿಷಯವಲ್ಲ, ಆದರೆ ಶರಣಾಗುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಗಡಾಫಿ ಪರ ಬೆಂಬಲಿಗರ ವಿರುದ್ಧವೂ ನ್ಯಾಟೋ ತನ್ನ ದಾಳಿಯನ್ನು ಮುಂದುವರಿಸಿದೆ. ನ್ಯಾಟೋ ವೈಮಾನಿಕ ಕಾರ್ಯಾಚರಣೆ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ. ಕಳೆದ ಮೇ ತಿಂಗಳಿನಲ್ಲಿ ದಕ್ಷಿಣ ಆಫ್ರಿಕಾ ಅಧ್ಯಕ್ಷ ಜಾಕೋಬ್ ಜುಮಾ ಭೇಟಿ ನೀಡಿದ ಸಂದರ್ಭದಲ್ಲಿ ಜತೆಯಾಗಿ ಟಿವಿ ಫೂಟೇಜ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಆ ನಂತರ ಗಡಾಫಿ ಟಿವಿಯಲ್ಲಿ ಕಾಣಿಸಿಕೊಂಡಿಲ್ಲ ಎಂದು ವರದಿ ತಿಳಿಸಿದೆ.