ಮುಂಬೈ ಭಯೋತ್ಪಾದನಾ ದಾಳಿಕೋರರನ್ನು ಶಿಕ್ಷಿಸುವಲ್ಲಿ ಪಾಕಿಸ್ತಾನದ ಕಾರ್ಯವೈಖರಿ ನಿರೀಕ್ಷಿತ ಮಟ್ಟದಲ್ಲಿ ಇಲ್ಲ ಎಂಬ ಭಾರತದ ಆರೋಪವನ್ನು ತಳ್ಳಿಹಾಕಿರುವ ಪಾಕ್ ಆಂತರಿಕ ಸಚಿವ ರೆಹಮಾನ್ ಮಲಿಕ್, ಆ ನಿಟ್ಟಿನಲ್ಲಿ ಭಾರತದ ಅಹವಾಲು ಕೇಳಲು ಪಾಕ್ ಸಿದ್ದವಾಗಿದೆ ಎಂದು ತಿಳಿಸಿದ್ದಾರೆ.
ನಾವು ಭಾರತದ ಜತೆ ಸ್ನೇಹ ಸಂಬಂಧವನ್ನು ಹೊಂದುವ ಇಚ್ಛೆ ಹೊಂದಿದ್ದೇವೆ. ಅಲ್ಲದೇ ನಾವು ಎಲ್ಲಾ ರೀತಿಯಿಂದಲೂ ಸಹಕಾರ ನೀಡುವುದರ ಜತೆಗೆ ಭಾರತದ ಎಲ್ಲಾ ದೂರನ್ನು ಕೇಳಲು ಸಿದ್ದರಾಗಿದ್ದೇವೆ ಎಂದು ಹೇಳಿದರು. ಅಲ್ಲದೇ ಮುಂಬೈ ಭಯೋತ್ಪಾದನಾ ದಾಳಿ ಕುರಿತಂತೆ ನಾವು ಸಾಕಷ್ಟು ಕ್ರಮ ಕೈಗೊಂಡಿರುವುದಾಗಿ ಸುದ್ದಿಗಾರರ ಜತೆ ಮಾತನಾಡುತ್ತ ಸ್ಪಷ್ಟಪಡಿಸಿದ್ದಾರೆ.
ಮುಂಬೈ ಭಯೋತ್ಪಾದನಾ ದಾಳಿಯ ನಿಜವಾದ ರೂವಾರಿಗಳ ವಿರುದ್ಧ ಪಾಕಿಸ್ತಾನ ಕಠಿಣ ಕ್ರಮ ಕೈಗೊಳ್ಳುವವರೆಗೆ ಪಾಕ್ ಜತೆ ಯಾವುದೇ ಮಾತುಕತೆ ನಡೆಸುವ ಪ್ರಶ್ನೆಯೇ ಇಲ್ಲ ಎಂದು ಗೃಹ ಸಚಿವ ಚಿದಂಬರಂ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ಎಚ್ಚರಿಕೆ ನೀಡಿದ್ದರು.
ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಮಿ ಅಧಿಕಾರಿ ಸೇರಿದಂತೆ ಐವರ ಪಟ್ಟಿಯನ್ನು ಭಾರತ ಪಾಕಿಸ್ತಾನಕ್ಕೆ ನೀಡಿತ್ತು. ಆದರೆ ಪಾಕಿಸ್ತಾನ ಈವರೆಗೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಚಿದು ಅಸಮಾಧಾನ ವ್ಯಕ್ತಪಡಿಸಿದ್ದರು.