ಮುಂಬೈ ಭಯೋತ್ಪಾದನಾ ದಾಳಿಗೆ ಸಂಬಂಧಿಸಿದಂತೆ ತಹಾವ್ವೂರ್ ರಾಣಾ ವಹಿಸಿದ್ದ ಪಾತ್ರದ ಬಗ್ಗೆ ಷಿಕಾಗೋ ನ್ಯಾಯಾಲಯದಲ್ಲಿ ವಿಚಾರಣೆ ಮುಕ್ತಾಯವಾಗಿದ್ದು 26/11ರ ಪ್ರಕರಣದಲ್ಲಿ ರಾಣಾನನ್ನು ಖುಲಾಸೆಗೊಳಿಸಿದೆ. ಆದರೆ ಲಷ್ಕರ್ ಇ ತೊಯ್ಬಾಗೆ ಶಸ್ತ್ರಾಸ್ತ್ರ ಪೂರೈಕೆ ಮತ್ತು ಡೆನ್ಮಾರ್ಕ್ ದಾಳಿ ಸಂಚಿನ ಪ್ರಕರಣದಲ್ಲಿ ಆರೋಪಿ ಎಂದು ಅಂತಿಮ ತೀರ್ಪು ನೀಡಿದೆ.
ಮುಂಬೈ ದಾಳಿಗೆ ಸಂಬಂಧಿಸಿದಂತೆ 12 ಮಂದಿಯ ನ್ಯಾಯಪೀಠ ಎರಡು ದಿನಗಳ ಕಾಲ 50ರ ಹರೆಯದ ರಾಣಾ ಮತ್ತು ಸಹ ಆರೋಪಿ ಡೇವಿಡ್ ಕೋಲ್ಮನ್ ಹೆಡ್ಲಿಯ ಕುರಿತ ವಿಚಾರಣೆಯನ್ನು ಗುರುವಾರ ಮುಕ್ತಾಯಗೊಳಿಸಿ ಈ ತೀರ್ಪನ್ನು ನೀಡಿದೆ.
ಎರಡು ಆರೋಪಗಳಲ್ಲಿ ದೋಷಿಯಾಗಿರುವ ರಾಣಾ ಸುಮಾರು 30 ವರ್ಷಗಳ ಜೈಲುವಾಸ ಅನುಭವಿಸಬೇಕಾಗಲಿದೆ ಎಂದು ಅಮೆರಿಕದ ಜಸ್ಟೀಸ್ ಡಿಪಾರ್ಟ್‌ಮೆಂಟ್ ಹೇಳಿಕೆ ತಿಳಿಸಿದೆ. ಆದರೆ ಶಿಕ್ಷೆಯ ದಿನಾಂಕವನ್ನು ಕೋರ್ಟ್ ನಿಗದಿಪಡಿಸಿಲ್ಲ.
ಎರಡು ದಿನಗಳ ಕಾಲದ ನ್ಯಾಯದಾನ ಪ್ರಕ್ರಿಯೆಯಲ್ಲಿ ಅಮೆರಿಕ ಜಿಲ್ಲಾ ನ್ಯಾಯಾಧೀಶ ಹ್ಯಾರೈ ಡಿ ಲೈನೆನಾವೆಬೆರ್ ಅವರು ತಮ್ಮ ಅಂತಿಮ ತೀರ್ಪನ್ನು ನೀಡಿದರು.
ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ರಾಣಾ ಪರ ವಕೀಲರು, ಎಲ್ಲ ಅನಾಹುತಗಳಿಗೆ ಹೆಡ್ಲಿಯೇ ಕಾರಣ. ಆತನಿಂದಾಗಿಯೇ ತಮ್ಮ ಕಕ್ಷಿದಾರನಿಗೆ ಮೋಸವಾಗಿದೆ. ಆತ ಧಾರ್ಮಿಕ ಹಿನ್ನೆಲೆಯುಳ್ಳ ವ್ಯಕ್ತಿ ಎಂದು ವಾದಿಸಿದ್ದರು. ಉದ್ಯಮಿಯಾಗಿರುವ ರಾಣಾ ಮುಂಬೈ, ಲಾಹೋರ್ ಮತ್ತು ಕರಾಚಿ, ಡೆನ್ಮಾರ್ಕ್‌ಗಳಲ್ಲಿ ತನ್ನ ವ್ಯವಹಾರ ವಿಸ್ತರಿಸಲು ಮುಂದಾಗಿದ್ದ ಎಂದು ತಿಳಿಸಿದ್ದರು.
ಏತನ್ಮಧ್ಯೆ, ಮುಂಬೈ ದಾಳಿಗೆ ಸಂಬಂಧಿಸಿದಂತೆ ರಾಣಾ ಹೆಡ್ಲಿಗೆ ನೆರವಾಗಿರುವ ಬಗ್ಗೆ ಬಹಳಷ್ಟು ಸಾಕ್ಷ್ಯಗಳಿವೆ. ಮುಂಬೈ ದಾಳಿಯಲ್ಲಿ ಅಸುನೀಗಿದವರಿಗೆ ನ್ಯಾಯ ದೊರೆಯಬೇಕಾದರೆ, ರಾಣಾಗೆ ಶಿಕ್ಷೆಯಾಗಲೇಬೇಕು ಎಂದು ಸರಕಾರಿ ಪರ ವಕೀಲರು ವಾದಿಸಿದ್ದರು. ಮುಂಬೈ ದಾಳಿ ಕುರಿತಂತೆ ಸುಮಾರು ಮೂರು ವಾರಗಳ ಕಾಲ ದೀರ್ಘಕಾಲ ಷಿಕಾಗೋ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು.
ವಾದ-ಪ್ರತಿವಾದದ ನಂತರ ಕೋರ್ಟ್, ಮುಂಬೈ ದಾಳಿ ಪ್ರಕರಣದಲ್ಲಿ ರಾಣಾನನ್ನು ಖುಲಾಸೆಗೊಳಿಸಿ, ಎರಡು ಪ್ರಕರಣದಲ್ಲಿ ದೋಷಿ ಎಂದು ತೀರ್ಪು ನೀಡಿರುವುದು ಮುಂಬೈ ದಾಳಿಯಲ್ಲಿ ಮಡಿದ ಕುಟುಂಬಗಳ ಅಸಮಾಧಾನಕ್ಕೆ ಕಾರಣವಾಗಿದೆ.