:ಒಸಾಮಾ ಬಿನ್ ಲಾಡೆನ್ ನಿಜವಾಗಿಯೂ ಸಾವನ್ನಪ್ಪಿದ್ದಾನೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ತಾನು ಲಾಡೆನ್ ಮೃತದೇಹ ಸಾಗರದಾಳದಲ್ಲಿ ಪತ್ತೆ ಹಚ್ಚುವ ಕೆಲಸಕ್ಕೆ ಮುಂದಾಗುವುದಾಗಿ ಕ್ಯಾಲಿಫೋರ್ನಿಯಾದ ನುರಿತ ಮುಳುಗುತಜ್ಞ, ಉದ್ಯಮಿ 59ರ ಹರೆಯದ ಬಿಲ್ ವಾರ್ರೆನ್ ಘೋಷಿಸಿದ್ದಾರೆ.
ನಾನು ಈ ಕೆಲಸವನ್ನು ಮಾಡಿಯೇ ತೀರುತ್ತೇನೆ, ಯಾಕೆಂದರೆ ನಾನೊಬ್ಬ ದೇಶಭಕ್ತ ಅಮೆರಿಕನ್, ಲಾಡೆನ್ ಸಾವನ್ನಪ್ಪಿರುವ ವಿಷಯದ ಸತ್ಯಾಸತ್ಯಾತೆ ಎಲ್ಲರೂ ತಿಳಿದುಕೊಳ್ಳಬೇಕಾಗಿದೆ. ಇದನ್ನು ನಾನು ಜಗತ್ತಿಗಾಗಿ ಮಾಡುತ್ತಿದ್ದೇನೆ ಎಂದು ವಾರ್ರೆನ್ ನ್ಯೂಯಾರ್ಕ್ ಪೋಸ್ಟ್ ಪತ್ರಿಕೆಗೆ ತಿಳಿಸಿದ್ದಾರೆ.
9/11ರ ದಾಳಿಯ ಮಾಸ್ಟರ್ ಮೈಂಡ್ ಎಂದೇ ನಂಬಲಾಗಿದ್ದ ಅಲ್ ಖಾಯಿದಾ ವರಿಷ್ಠ ಒಸಾಮಾ ಬಿನ್ ಲಾಡೆನ್ ಬೇಟೆಗಾಗಿ ಸುಮಾರು ಒಂದು ದಶಕಗಳ ಕಾಲ ಸಮರ ನಡೆಸಿ ಕೊನೆಗೂ ಮೇ 2ರಂದು ಪಾಕಿಸ್ತಾನದ ಅಬೋಟಾಬಾದ್‌ನಲ್ಲಿ ಅಮೆರಿಕದ ವಿಶೇಷ ಸೇನಾ ಪಡೆ ದಾಳಿ ನಡೆಸುವ ಮೂಲಕ ಹತ್ಯೆಗೈದಿತ್ತು.
ಏತನ್ಮಧ್ಯೆ ಲಾಡೆನ್ ಹತ್ಯೆಗೈದ ನಂತರ ತರಾತುರಿಯಲ್ಲೇ ಆತನ ಮೃತದೇಹವನ್ನು ಸಮುದ್ರದಲ್ಲಿ ಎಸೆಯಲಾಗಿರುವುದಾಗಿ ಅಮೆರಿಕ ಹೇಳಿಕೆ ನೀಡಿತ್ತು. ಈ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿಯಾಗಲಿ, ಫೋಟೋವನ್ನಾಗಲಿ ಅಮೆರಿಕ ಬಿಡುಗಡೆ ಮಾಡಿಲ್ಲವಾಗಿತ್ತು. ಹಾಗಾಗಿ ತಾನು ಅಮೆರಿಕ ಸರಕಾರವನ್ನಾಗಲಿ ಅಥವಾ ಒಬಾನನ್ನು ತಾನು ನಂಬುವುದಿಲ್ಲ ಎಂದು ವಾರ್ರೆನ್ ತಿಳಿಸಿದ್ದಾರೆ.
ಇದೀಗ ಲಾಡೆನ್ ನಿಜಕ್ಕೂ ಸಾವನ್ನಪ್ಪಿದ್ದಾನೆಯೇ ಎಂಬ ಬಗ್ಗೆ ಶೋಧಕ್ಕಿಳಿಯಲಿರುವ ವಾರ್ರೆನ್ ಅಂದಾಜಿನ ಪ್ರಕಾರ ಇದಕ್ಕೆ ಸುಮಾರು 400,000 ಡಾಲರ್‌ನಷ್ಟು ವೆಚ್ಚವಾಗಲಿದೆಯಂತೆ. ಅಲ್ಲದೇ ಇದಕ್ಕಾಗಿ ಹಲವಾರು ಹಡಗು ಮತ್ತು ಉನ್ನತ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಒಂದು ವೇಳೆ ಶವ ದೊರೆತಲ್ಲಿ ಅದನ್ನು ಹಡಗಿನಲ್ಲಿಯೇ ಡಿಎನ್ಎ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ವಿವರಿಸಿದ್ದಾರೆ.