2002ರಲ್ಲಿ ಸಂಭವಿಸಿದ ಬಾಲಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಶಾಮೀಲಾಗಿರುವ ಶಂಕೆಯ ಮೇಲೆ ಉಗ್ರನೊಬ್ಬನನ್ನು ಬಂಧಿಸಿರುವುದಾಗಿ ಇಂಡೋನೇಷ್ಯಾ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಸೆಂಟ್ರಲ್ ಜಾವಾದ ಪೆಕಾಲೋಗಾನ್ ನಗರದಲ್ಲಿ ಜೂನ್ 9ರಂದು ಶಂಕಿತ ಉಗ್ರ ಹೆರು ಕುನ್‌ಕೋರೋ ಎಂಬಾತನನ್ನು ಸೆರೆ ಹಿಡಿಯಲಾಗಿದೆ ಎಂದು ನ್ಯಾಷನಲ್ ಪೊಲೀಸ್ ವಕ್ತಾರ ಬ್ರಿಗೇಡಿಯರ್ ಜನರಲ್ ಆಂಟನ್ ಬಾಚ್ರುಲ್ ಅಲಾಮ್ ಹೇಳಿದ್ದಾರೆ.
ಬಾಲಿ ಬಾಂಬ್ ಸ್ಫೋಟ ಘಟನೆಯಲ್ಲಿ 202 ಮಂದಿ ಬಲಿಯಾಗಿದ್ದರು. ಘಟನೆಗೆ ಸಂಬಂಧಿಸಿದಂತೆ ಇತ್ತೀಚೆಗೆ ಹೆರು ಸೇರಿದಂತೆ ಬಂಧಿತರ ಸಂಖ್ಯೆ 16 ಆಗಿರುವುದಾಗಿ ಪೊಲೀಸರು ವಿವರಿಸಿದ್ದಾರೆ.
ಇತ್ತೀಚೆಗೆ ಇಂಡೋನೇಷ್ಯಾದಲ್ಲಿ ಉಗ್ರರ ಉಪಟಳ ಹೆಚ್ಚುತ್ತಿದ್ದು, ಅವರು ಪೊಲೀಸರನ್ನು ಗುರಿಯಾಗಿರಿಸಿ ದಾಳಿ ನಡೆಸುತ್ತಿರುವುದು ಈ ಹಿಂದೆ ಹೆಚ್ಚಳವಾಗಿತ್ತು. ಇದೀಗ ಇಂತಹ ದಾಳಿ ನಡೆಸುತ್ತಿರುವ ಉಗ್ರರನ್ನು ಮಟ್ಟಹಾಕಲು ಭದ್ರತಾ ಅಧಿಕಾರಿಗಳು ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದಾರೆ.