ಮಕ್ಕಳು ಅತ್ಯಾಚಾರ ಎಸಗಿರುವ ಆರೋಪದ ಹಿನ್ನೆಲೆಯಲ್ಲಿ ತಾಯಿಯನ್ನು ನಡುಬೀದಿಯಲ್ಲಿ ಬೆತ್ತಲೆ ಮೆರವಣಿಗೆ ನಡೆಸಿದ ಅಮಾನವೀಯ ಘಟನೆ ಪಾಕಿಸ್ತಾನದ ವಾಯುವ್ಯ ಪ್ರದೇಶದಲ್ಲಿ ನಡೆದಿರುವ ಅಂಶ ತಡವಾಗಿ ಬೆಳಕಿಗೆ ಬಂದಿದೆ.
ಖೈಬೆರ್ ಪಾಖ್ತುನ್‌ಖಾವಾ ಪ್ರಾಂತ್ಯದ ಹರಿಪುರ್ ಗ್ರಾಮದ ನೀಲೊರ್ ಬಾಲಾ ಎಂಬಲ್ಲಿ ಜೂನ್ ಮೊದಲ ವಾರದಲ್ಲಿ ಮಹಿಳೆಯೊಬ್ಬಳನ್ನು ನಟ್ಟನಡು ಬೀದಿಯಲ್ಲಿ ನಾಲ್ಕು ಮಂದಿ ಶಸ್ತ್ರ ಸಜ್ಜಿತ ವ್ಯಕ್ತಿಗಳು ನಗ್ನಗೊಳಿಸಿ ಮೆರವಣಿಗೆ ನಡೆಸಿರುವುದಾಗಿ ವರದಿಯೊಂದು ತಿಳಿಸಿದೆ.
ಈ ಘಟನೆ ನಡೆದಿರುವುದು ನಿಜ ಎಂದು ಪೊಲೀಸ್ ಅಧಿಕಾರಿಗಳು ಖಚಿತಪಡಿಸಿದ್ದಾರೆ, ಅಲ್ಲದೇ ಜಿರ್ಗಾದ ಮೂವರು ಸದಸ್ಯರನ್ನು ಈ ಸಂಬಂಧ ಬಂಧಿಸಿರುವುದಾಗಿ ದಿ ಎಕ್ಸ್‌ಪ್ರೆಸ್ ಟ್ರೈಬ್ಯೂನ್ ವರದಿ ಮಾಡಿದೆ.
ನೀಲೊರ್ ಬಾಲಾದ ಮಹಿಳೆ ತನ್ನ ಮೇಲೆ ಇಬ್ಬರು ವ್ಯಕ್ತಿಗಳು ಅತ್ಯಾಚಾರ ಎಸಗಿರುವುದಾಗಿ ಆರೋಪಿಸಿದ್ದಳು. ಈ ವಿಷಯದ ಬಗ್ಗೆ ಲಾಹೋರ್‌ನಲ್ಲಿ ವಾಸವಾಗಿದ್ದ ಪತಿ ಸ್ಥಳೀಯ ಗ್ರಾಮದ ನ್ಯಾಯ ಮಂಡಳಿಯ (ಜಿರ್ಗಾ) ಮುಖ್ಯಸ್ಥರಾದ ಬಾಶೀರ್ ಅಬ್ಬಾಸಿ ಮತ್ತು ರಾಖೀಬ್ ಅವರಲ್ಲಿ ದೂರು ನೀಡಿದ್ದ.
ಅತ್ಯಾಚಾರಕ್ಕೊಳಗಾದ ಮಹಿಳೆ ಕೂಡಲೇ ತನ್ನ ಗಂಡನಿಗೆ ವಿಚ್ಛೇದನ ನೀಡಬೇಕೆಂದು ಜಿರ್ಗಾ ತಾಕೀತು ಮಾಡಿತ್ತು!.ಅಲ್ಲದೇ ಅತ್ಯಾಚಾರ ಎಸಗಿದ ಇಬ್ಬರನ್ನೂ ಶಿಕ್ಷೆಗೊಳಿಸಪಡಿಸಬೇಕು ಎಂದು ನಿರ್ಧರಿಸಿತ್ತು. ಆ ಬಳಿಕ ಪತ್ನಿ ಕೂಡಲೇ ವಿಚ್ಛೇದನ ನೀಡಬೇಕೆಂದು ಪತಿ ಒತ್ತಾಯ ಹೇರಿದ್ದ.
ನಂತರ ಮನೆಗೆ ವಾಪಸಾದ ಗಂಡ ಮತ್ತು ಆತನ ಮೂವರು ಸಹೋದರರು ಅತ್ಯಾಚಾರ ಎಸಗಿದ್ದ ನೆರೆಮನೆಯ ರಾಶಿದ್ ಮತ್ತು ಕಾಜೀಮ್‌ನನ್ನು ಹುಡುಕಾಡಿದ್ದರು. ಆದರೆ ಅಷ್ಟರಲ್ಲಿ ಅವರು ಪರಾರಿಯಾಗಿದ್ದು, ಮನೆಯಲ್ಲಿದ್ದ ತಾಯಿಯನ್ನು ಬೀದಿಗೆ ಎಳೆದು ತಂದಿದ್ದರು. ನಂತರ ಆಕೆ ಮೇಲೆ ರೈಫಲ್ ಹಿಡಿಕೆಯಿಂದ ಹಿಗ್ಗಾಮುಗ್ಗಾ ಥಳಿಸಿ, ನಡುಬೀದಿಯಲ್ಲೇ ನಗ್ನವಾಗಿ ಮೆರವಣಿಗೆ ನಡೆಸಿರುವುದಾಗಿ ವರದಿ ವಿವರಿಸಿದೆ. ಈ ಘಟನೆಯನ್ನು ಮಾನವ ಹಕ್ಕು ಕಾರ್ಯಕರ್ತರು ತೀವ್ರವಾಗಿ ಖಂಡಿಸಿ,ಜಿರ್ಗಾ ಸದಸ್ಯರ ವಿರುದ್ಧ ದೂರು ದಾಖಲಿಸಿರುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.