ಮಾದಕ ದ್ರವ್ಯ: ಮಲೇಷ್ಯಾದಲ್ಲಿ ಭಾರತೀಯ ಅಜ್ಜಿಗೆ ಮರಣ ದಂಡನೆ!
ಕೌಲಾಲಂಪುರ, ಶನಿವಾರ, 18 ಜೂನ್ 2011( 13:10 IST )
ಚೆನ್ನೈ ಮೂಲದ 62 ವರ್ಷದ ವಯೋವೃದ್ದೆ ಮಾದಕ ದ್ರವ್ಯ ಕಳ್ಳ ಸಾಗಣೆ ಆರೋಪದಲ್ಲಿ ಮರಣದಂಡನೆ ಎದುರಿಸುತ್ತಿದ್ದಾರೆ. ಪ್ರವಾಸಿ ವೀಸಾದಲ್ಲಿ ಮಲೇಷ್ಯಾ ಸೇರಿರುವ ಇವರು ಮಾದಕ ವಸ್ತು ಕಳ್ಳಸಾಗಣೆ ಮಾಡಿರುವುದು ಪ್ರಬಲ ಸಾಕ್ಷಾಧಾರಗಳಿಂದ ಸಾಬೀತಾದ ಹಿನ್ನಲೆಯಲ್ಲಿ ಸ್ಥಳೀಯ ನ್ಯಾಯಾಲಯವೊಂದು ಇವರಿಗೆ ಗಲ್ಲು ಶಿಕ್ಷೆ ವಿಧಿಸಿತ್ತು.
ಕೌಲಾಲಂಪುರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2,925 ಗ್ರಾಂ ಕೆಟಾಮಿನ್ ಮಾದಕ ವಸ್ತು ಕಳ್ಳಸಾಗಾಟ ಮಾಡುತ್ತಿದ್ದಾಗ ಈ ಮೂರು ಮಕ್ಕಳ ತಾಯಿ ಫಾಜಿಲಾ ಬೀ ಅಬ್ದುಲ್ ಕರೀಂ 2009 ರ ಫೆಬ್ರವರಿ 13 ರಂದು ಸಿಕ್ಕಿಬಿದ್ದಿದ್ದು, ಕಳೆದ ತಿಂಗಳು ಆರೋಪ ಪಟ್ಟಿ ಸಲ್ಲಿಸಲಾಗಿತ್ತು.
ಆರೋಪಿ ಕೊಟ್ಟಿರುವ ಹೇಳಿಕೆಯನ್ನು ಆಲಿಸಿದ ಹೈಕೋರ್ಟ್ ನ್ಯಾಯಮೂರ್ತಿ ನೂರ್ ಅಜಿಯಾನ್, ಈ ಪ್ರಕರಣದಲ್ಲಿ ಆರೋಪಿಯು ಉದ್ಯೋಗ ಅರಸಿ ಮಲೇಷ್ಯಾಗೆ ಬಂದಂತೆ ಅನಿಸುವುದಿಲ್ಲ ಎಂದು ತಿಳಿಸಿದರು. ಆರೋಪಿಯು ಹೇಳುತ್ತಿರುವುದೇ ನಿಜವಾಗಿದ್ದರೆ, ಆಕೆಯ ಬಳಿ ಅವಳ ಉದ್ಯೋಗದಾತರ ವಿವರಗಳು ಇರುತ್ತಿದ್ದವು ಮತ್ತು ಉದ್ಯೋಗದ ಪರವಾನಗಿಯೂ ಇರುತ್ತಿತ್ತು ಎಂದು ನ್ಯಾಯಾಧೀಶೆ ಹೇಳಿದ್ದಾರೆ.
ಆರೋಪಿಯು ಪ್ರವಾಸೀ ವೀಸಾದಲ್ಲಿ ಬಂದಿದ್ದು, ಆಕೆ ಸಲ್ಲಿಸಿರುವುದೆಲ್ಲ ಸುಳ್ಳು ದಾಖಲೆಗಳು. ಅವುಗಳನ್ನೆಲ್ಲಾ ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಾಧೀಶೆ ಹೇಳಿದರು.