ಅಲ್ ಖಾಯಿದಾ ವರಿಷ್ಠ ಒಸಾಮಾ ಬಿನ್ ಲಾಡೆನ್ ವಿರುದ್ಧದ ಎಲ್ಲಾ ಕ್ರಿಮಿನಲ್ ಆರೋಪಗಳನ್ನು ವಜಾಗೊಳಿಸುವಂತೆ ಕೋರಿರುವ ಪ್ರಾಸಿಕ್ಯೂಟರ್ಸ್ ಮನವಿಯನ್ನು ಅಮೆರಿಕದ ಫೆಡರಲ್ ಕೋರ್ಟ್ ನ್ಯಾಯಾಧೀಶರು ಪುರಸ್ಕರಿಸಿರುವುದಾಗಿ ವರದಿಯೊಂದು ತಿಳಿಸಿದೆ.
ಪಾಕಿಸ್ತಾನದ ಅಬೋಟಾಬಾದ್‌ನ ಅಡಗುತಾಣದಲ್ಲಿ ಠಿಕಾಣಿ ಹೂಡಿದ್ದ ಲಾಡೆನ್‌ನನ್ನು ಮೇ 2ರಂದು ಅಮೆರಿಕದ ವಿಶೇಷ ಸೇನಾಪಡೆಗಳು ದಾಳಿ ನಡೆಸಿ ಹತ್ಯೆಗೈದ ಆರು ವಾರಗಳ ನಂತರ ಕೋರ್ಟ್‌ನ ಈ ಆದೇಶವನ್ನು ಶುಕ್ರವಾರ ಸಾರ್ವಜನಿಕವಾಗಿ ಬಹಿರಂಗಗೊಳಿಸಿದೆ.
ಜಾಗತಿಕ ಭಯೋತ್ಪಾದಕನಿರಲಿ ಅಥವಾ ಆರೋಪ ಹೊತ್ತಿರುವ ವ್ಯಕ್ತಿ ಸಾವನ್ನಪ್ಪಿದ ಪ್ರಕರಣಗಳಲ್ಲಿ ಈ ರೀತಿ ಕೋರ್ಟ್‌ಗೆ ಮನವಿ ಮಾಡಿಕೊಳ್ಳುವ ಪ್ರಕ್ರಿಯೆ ಇರುವುದಾಗಿ ಪೆಂಟಾಗಾನ್ ಮೂಲಗಳು ತಿಳಿಸಿವೆ.
ಆಫ್ರಿಕಾದಲ್ಲಿನ ಅಮೆರಿಕದ ಎರಡು ರಾಯಭಾರ ಕಚೇರಿಗಳ ಮೇಲೆ ಭಯೋತ್ಪಾದಕ ದಾಳಿ ನಡೆಸಿದ ಪ್ರಕರಣದಲ್ಲಿ 1998 ಜೂನ್ ತಿಂಗಳಿನಲ್ಲಿ ಅಲ್ ಖಾಯಿದಾ ಮುಖಂಡ ಲಾಡೆನ್‌ನನ್ನು ಮ್ಯಾನ್‌ಹಟ್ಟನ್ ಫೆಡರಲ್ ಕೋರ್ಟ್ ದೋಷಿ ಎಂದು ತೀರ್ಪು ನೀಡಿತ್ತು. ಲಾಡೆನ್ ವಿರುದ್ಧದ ಏಕೈಕ ಆರೋಪ ಇದಾಗಿದೆ.