ಕಾರ್ಗಿಲ್ ಅಧ್ವಾನಕ್ಕೆ ಪಾಕಿಸ್ತಾನದ ಮಿಲಿಟರಿ ಮಾಜಿ ಆಡಳಿತಗಾರ ಪರ್ವೆಜ್ ಮುಷರ್ರಫ್ ಹೊಣೆಗಾರರು ಎಂಬ ಪಿಎಂಎಲ್-ಎನ್ ವರಿಷ್ಠ ನವಾಜ್ ಶರೀಫ್ ಆರೋಪವನ್ನು ತಿರಸ್ಕರಿಸಿರುವ ಮುಷ್, ಮಾಜಿ ಪ್ರಧಾನಿ ಕಾಶ್ಮೀರ ಮತ್ತು ಕಾರ್ಗಿಲ್ ಪ್ರಕರಣದ ಕುರಿತು ಜನರ ದಿಕ್ಕು ತಪ್ಪಿಸುತ್ತಿರುವ ಹೇಳಿಕೆಗಳನ್ನು ನೀಡುತ್ತಿರುವುದನ್ನು ನಿಲ್ಲಿಸಲಿ ಎಂದು ತಿರುಗೇಟು ನೀಡಿದ್ದಾರೆ.
1999ರಲ್ಲಿ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಜತೆ ಕಾಶ್ಮೀರ ವಿವಾದ ಬಗೆಹರಿಸಲು ಒಂದು ಹಂತದಲ್ಲಿ ನಿರ್ಧಾರಕ್ಕೆ ಬರಲಾಗಿತ್ತು. ಆದರೆ ನವಾಜ್ ಶರೀಷ್ ಆ ಬಗ್ಗೆಯೂ ಸುಳ್ಳು ಹೇಳುತ್ತಿದ್ದಾರೆ. ಅದೇ ರೀತಿ ಕಾರ್ಗಿಲ್ ಕುರಿತ ಸತ್ಯವನ್ನೂ ಶರೀಫ್ ಹೇಳುತ್ತಿಲ್ಲ ಎಂದು ಮುಷರ್ರಫ್ ಗಂಭೀರವಾಗಿ ಆರೋಪಿಸಿದ್ದಾರೆ.
ಲಂಡನ್‌ನಲ್ಲಿ ಆಲ್ ಪಾಕಿಸ್ತಾನ್ ಮುಸ್ಲಿಮ್ ಲೀಗ್(ಎಪಿಎಂಎಲ್) ಪಕ್ಷದ ಕಾರ್ಯಕರ್ತರ ಜತೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸುತ್ತಿದ್ದ ವೇಳೆ ಮಾತನಾಡಿದ ಅವರು, ಕಾರ್ಗಿಲ್ ಮತ್ತು ಕಾಶ್ಮೀರ ವಿಷಯದ ಕುರಿತು ಜನರನ್ನು ತಪ್ಪು ದಾರಿಗೆಳೆಯುವ ಹೇಳಿಕೆ ನೀಡುತ್ತಿರುವುದನ್ನು ಶರೀಫ್ ಮೊದಲು ನಿಲ್ಲಿಸಬೇಕು ಎಂದು ಸಲಹೆ ನೀಡಿದರು.
ಕಾರ್ಗಿಲ್ ಯುದ್ಧದ ಕುರಿತು ಸಂಪೂರ್ಣ ಮಾಹಿತಿ ಶರೀಫ್ ಅವರಿಗೆ ತಿಳಿದಿದೆ. ಇದೀಗ ಸತ್ಯವನ್ನು ಮರೆಮಾಚಿ, ತಪ್ಪನ್ನು ಇನ್ನೊಬ್ಬರ ಮೇಲೆ ಹೊರಿಸುವ ಯತ್ನ ಮಾಡುತ್ತಿರುವುದಾಗಿ ದೂರಿದರು.