ಪಾಕಿಸ್ತಾನದ ವಿರುದ್ಧ ಭಾರತ ದಾಳಿ ಮಾಡಲಿದೆ ಎಂದು ಎಚ್ಚರಿಸಿರುವ ನಿಷೇಧಿತ ಉಗ್ರಗಾಮಿ ಸಂಘಟನೆ ಜಮಾತ್ ಉದ್ ದವಾ (ಜೆಯುಡಿ), ಸಂಜೋತಾ ಎಕ್ಸ್‌ಪ್ರೆಸ್ ರೈಲು ಬಾಂಬ್ ಸ್ಫೋಟದ ಆಪಾದನೆಯ ಹಿನ್ನೆಲೆಯಲ್ಲಿ ಬಂಧಿತರಾಗಿ ಜೈಲಿನಲ್ಲಿರುವವರನ್ನು ತಮಗೆ ಹಸ್ತಾಂತರಿಸಬೇಕು ಎಂದು ಒತ್ತಾಯಿಸಿದೆ.
ಕರಾಚಿಯ ಜಾಮಿಯಾ ಅಲ್ ದಿರ್‌ಸಾತ್‌ನಲ್ಲಿ ಸೋಮವಾರ ಆಯೋಜಿಸಿದ್ದ 'ಇಸ್ಲಾಂ ಧರ್ಮದ ರಕ್ಷಣೆ ಹಾಗೂ ಪಾಕಿಸ್ತಾನದ ಧೃಡತೆ' ಸಮಾವೇಶದಲ್ಲಿ 10 ಅಂಶಗಳ ನಿರ್ಣಯವನ್ನು ಅಂಗೀಕರಿಸಲಾಯಿತು.
ಅಮೆರಿಕವು ಪಾಕಿಸ್ತಾನದ ಶತ್ರು ಎಂದು ಘೋಷಿಸಿರುವ ಜೆಯುಡಿ, ಹತ್ಯೆ ಆಪಾದನೆಯ ಹಿನ್ನೆಲೆಯಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಭಾರತದ ಸರಬ್‌ಜಿತ್ ಸಿಂಗ್ ಅವರನ್ನು ಬಿಡುಗಡೆ ಮಾಡದಂತೆ ತಾಕೀತು ಮಾಡಿದೆ.
ಪಾಕಿಸ್ತಾನದ ವಿರುದ್ಧ ಭಾರತ ದಾಳಿ ಮಾಡಲಿದೆ ಎಂದು ಎಚ್ಚರಿಸಿರುವ ಸಂಘಟನೆಯು 2007ರಲ್ಲಿ ಸಂಜೋತಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಾಂಬ್ ಸ್ಫೋಟಿಸಿ 68 ಜನರ ಸಾವಿಗೆ ಕಾರಣವಾಗಿದ್ದ ಆಪಾದನೆಯ ಹಿನ್ನೆಲೆಯಲ್ಲಿ ಬಂಧಿತರಾಗಿ ಜೈಲಿನಲ್ಲಿರುವವರನ್ನು ತಮಗೆ ಹಸ್ತಾಂತರಿಸಬೇಕು ಎಂದು ಒತ್ತಾಯಿಸಿದೆ.
ಪಾಕಿಸ್ತಾನವನ್ನು ಅಸ್ಥಿರಗೊಳಿಸಲು ಭಾರತ, ಇಸ್ರೇಲ್ ಹಾಗೂ ಅಮೆರಿಕ ಯತ್ನಿಸುತ್ತಿವೆ ಎಂದು ಆಪಾದಿಸಿರುವ ಸಂಘಟನೆಯು, ದೇಶದ ನಾಗರಿಕರು ಒಟ್ಟಾಗಿ ಪಾಕಿಸ್ತಾನವನ್ನು ಸಮರ್ಥಿಸಿಕೊಳ್ಳಬೇಕು ಎಂದು ಕರೆ ನೀಡಿದೆ.
ಈ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಜೆಯುಡಿ ಮುಖಂಡ ಅಬ್ದುರ್ ರೆಹಮಾನ್ ಮಕ್ಕಿ, ಸ್ಥಳೀಯ ಹಾಗೂ ಪಾಶ್ಚಾತ್ಯ ರಾಷ್ಟ್ರಗಳು ಬಿಂಬಿಸಿರುವಷ್ಟು ಪಾಕಿಸ್ತಾನ ಕೆಟ್ಟದ್ದಲ್ಲ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.