ಮೂತ್ರ ವಿಸರ್ಜಿಸಿದ್ದಕ್ಕೆ ಕೆರೆ ನೀರನ್ನೇ ಖಾಲಿ ಮಾಡಿಸಿದ್ರು!
ಓರೆಗಾನ್, ಬುಧವಾರ, 22 ಜೂನ್ 2011( 12:09 IST )
ಅಮೆರಿಕದ ಓರೆಗಾವ್‌ನ ವ್ಯಕ್ತಿಯೊಬ್ಬ ಕೆರೆಯೊಳಗೆ ಮೂತ್ರ ಮಾಡಿ ತನ್ನ ಬಾಧೆ ಹಗುರ ಮಾಡಿಕೊಂಡಿದ್ದ. ಆದರೆ ಇದರ ಪರಿಣಾಮ ಸುಮಾರು ಎಂಟು ಲಕ್ಷ ಗ್ಯಾಲನ್ ನೀರನ್ನು ಹೊರಹಾಕಬೇಕಾಗಿ ಬಂದಿತ್ತು. ಯಾಕೆಂದರೆ ಅದು ಜನರು ಕುಡಿಯುವ ನೀರಾಗಿತ್ತು!
ಆತ ಏನೋ ಉಚ್ಚೆ ಹೊಯ್ದು ದೇಹಬಾಧೆ ತೀರಿಸಿಕೊಂಡಿದ್ದ. ಅಂತೂ ಈ ವಿಷಯ ತಿಳಿದ ಅಧಿಕಾರಿಗಳು ಜಲಾಶಯದಲ್ಲಿನ ನೀರನ್ನು 16 ಲಕ್ಷ ರೂಪಾಯಿ ಖರ್ಚು ಮಾಡಿ ಖಾಲಿ ಮಾಡಿದ್ದರು. ಜೋಶುವಾ ಸೀಟೆರ್ ಎಂಬಾತ ಓರೆಗಾನ್‌ನ ಪ್ರಿಸ್ಟೈನ್ ಕೆರೆಗೆ ಮೂತ್ರ ಮಾಡುತ್ತಿದ್ದ ದೃಶ್ಯ ಭದ್ರತಾ ಕೆಮರಾದಲ್ಲಿ ಸೆರೆಯಾಗಿತ್ತು.
ಈ ಜಲಾಶಯದ ನೀರನ್ನು ಕುಡಿಯಲು ಸರಬರಾಜು ಮಾಡಲಾಗುತ್ತಿದೆ. ಈ ಘಟನೆಯಿಂದ ಪೋರ್ಟ್‌ಲ್ಯಾಂಡ್ ನಗರದ ಜನರಿಗೆ ಯಾವುದೇ ರೀತಿಯಿಂದ ತೊಂದರೆ ಉಂಟಾಗುವುದಿಲ್ಲ ಎಂದು ಆರೋಗ್ಯ ತಜ್ಞರು ತಿಳಿಸಿರುವುದಾಗಿ ವರದಿ ಹೇಳಿದೆ.
ಯಾವುದೇ ವ್ಯಕ್ತಿಯ ದೇಹದಿಂದ ಹೊರಹೋಗುವ ಮೂತ್ರದ ಪ್ರಮಾಣ ಕೇವಲ 6ರಿಂದ 8 ಔನ್ಸ್ ಮಾತ್ರ. ಅಲ್ಲದೇ ಮೂತ್ರ ತುಂಬಾ ಪ್ರಮಾಣದಲ್ಲಿ ತೆಳು ಆಗಿರುತ್ತದೆ ಎಂದು ವಿವರಿಸಿದ್ದಾರೆ.
ಆದರೂ ಕುಡಿಯುವ ನೀರಿನ ಜಲಾಶಯಕ್ಕೆ ಮೂತ್ರ ಮಾಡಿರುವುದರಿಂದ ನಾವು ನೀರನ್ನು ಖಾಲಿ ಮಾಡುವ ನಿರ್ಧಾರ ಕೈಗೊಂಡಿರುವುದಾಗಿ ಪೋರ್ಟ್‌ಲ್ಯಾಂಡ್ ಜಲಮಂಡಳಿ ಬ್ಯೂರೋ ಅಧಿಕಾರಿ ಡೇವಿಡ್ ಶಾಫ್ ತಿಳಿಸಿದ್ದಾರೆ.
ಆದರೆ ಈ ಘಟನೆ ಬಗ್ಗೆ ಸಾರ್ವಜನಿಕರು ಸಾಕಷ್ಟು ಆಕ್ಷೇಪ ವ್ಯಕ್ತಪಡಿಸಿದ್ದರು. ನಾನು ಇವತ್ತು ಜಲಾಶಯದಿಂದ ಬಂದ ನೀರಿನಿಂದಲೇ ಆರೆಂಜ್ ಜ್ಯೂಸ್ ಮಾಡಿದ್ದೇನೆ. ಹಾಗಂತ ನೀವು ಉಚ್ಚೆ ಕುಡಿಯಲು ಬಯಸುತ್ತೀರಾ? ಎಂದು ಸ್ಥಳೀಯ ನಿವಾಸಿಯೊಬ್ಬರು ಪ್ರಶ್ನಿಸಿದ್ದು, ಅದೇ ಅರ್ಥದಲ್ಲಿ ಹಲವರು ಗಂಭೀರವಾಗಿ ಪ್ರಶ್ನಿಸಿರುವುದಾಗಿ ವರದಿ ವಿವರಿಸಿದೆ.
ಅಂತೂ ಮೂತ್ರ ಪುರಾಣ ಇಷ್ಟೆಲ್ಲಾ ಖರ್ಚು-ಆಕ್ರೋಶಕ್ಕೆ ಕಾರಣವಾದರೂ ಆತನನ್ನು ಈವರೆಗೂ ಬಂಧಿಸಿಲ್ಲ,ಯಾವುದೇ ಆರೋಪ ಪಟ್ಟಿಯನ್ನೂ ದಾಖಲಿಸಿಲ್ಲ. ಆದರೂ ಆತ ಭಾರೀ ಮೊತ್ತದ ದಂಡ ತೆರಬೇಕಾಗಬಹುದು ಎಂದು ವರದಿ ಹೇಳಿದೆ.
ಜಲಾಶಯಕ್ಕೆ ಉಚ್ಚೆ ಹೊಯ್ದ ಬಗ್ಗೆ ಕ್ಷಮೆ ಯಾಚಿಸಿರುವ ಜೋಶುವಾ ಸೀಟೆರ್, ನನಗೆ ನಿಜಕ್ಕೂ ಅದು ಕುಡಿಯುವ ನೀರು ಅಂತ ಗೊತ್ತಿರಲಿಲ್ಲವಾಗಿತ್ತು. ಅದು ಕೊಳಚೆ ನೀರಿನ ಪ್ಲ್ಯಾಂಟ್ ಎಂದು ತಿಳಿದಿದ್ದೆ. ಹಾಗಂತ ನಾನು ದಂಡ ಪಾವತಿಸುವ ಬಗ್ಗೆ ಚಿಂತಿಸುವುದಿಲ್ಲ ಎಂದು ಈ ಸಂದರ್ಭದಲ್ಲಿ ಹೇಳಿದ್ದಾನೆ.