ಆರು ತಿಂಗಳ ಪುಟ್ಟ ಬಾಲೆಯನ್ನು ಮೈಕ್ರೋವೇವ್ ಓವೆನ್‌ನಲ್ಲಿ ಹಾಕಿ ಸಾಯಿಸಿರುವ ಅಮಾನವೀಯ ಘಟನೆಯೊಂದು ಕ್ಯಾಲಿಫೋರ್ನಿಯಾದಿಂದ ವರದಿಯಾಗಿದ್ದು, ಈ ಕೃತ್ಯ ಎಸಗಿರುವ ಮಹಾತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇಪ್ಪತ್ತೊಂಬತ್ತು ವರ್ಷದ ಕಾ ಯಾಂಗ್ ಎಂಬ ಮಹಿಳೆ ಈ ಕೃತ್ಯ ಎಸಗಿದ್ದಾಳೆಂದು ಶಂಕಿಸಲಾಗಿದ್ದು, ಮೂರು ತಿಂಗಳ ತನಿಖೆಯ ನಂತರ ರಾಜಧಾನಿ ಸಾಕ್ರಾಮೆಂಟೋದ ನಿವಾಸದಲ್ಲಿ ಆಕೆಯನ್ನು ಬಂಧಿಸಲಾಗಿದೆ. ಕಳೆದ ಮಾರ್ಚ್ 17 ರಂದು ವಿದ್ಯುತ್ ಶಾಖದಿಂದ ಸುಟ್ಟಂತಹ ಸ್ಥಿತಿಯಲ್ಲಿ ಪುಟ್ಟ ಬಾಲಕಿಯ ಶವ ಪತ್ತೆಯಾಗಿತ್ತು. ನರಮಂಡಲ ಆಘಾತದಿಂದ ಮಗು ಸಾವನ್ನಪ್ಪಿರುವುದಾಗಿ ಸ್ವತಃ ತಾಯಿ ಹೇಳಿಕೆ ಕೊಟ್ಟಿದ್ದರು.
ಪುಟ್ಟ ಬಾಲೆಯನ್ನು ಈ ರೀತಿ ಹಿಂಸಾತ್ಮಕವಾಗಿ ಸಾಯಿಸಲು ಸ್ವತಃ ತಾಯಿಗೆ ಪ್ರಚೋದಿಸಿದ ಮುಖ್ಯ ಅಂಶವಾದರೂ ಏನು ಎಂಬುದೇ ನಮಗೇ ಗೊಂದಲವಾಗುತ್ತಿದೆ ಎಂದು ತನಿಖಾಧಿಕಾರಿಗಳು ಹೇಳಿರುವುದನ್ನು ಮಾಧ್ಯಮಗಳು ವರದಿ ಮಾಡಿದೆ.
ಮಗುವಿನ ಕೂದಲು ಮತ್ತು ಬಟ್ಟೆ ಯಾವುದೇ ರೀತಿಯಲ್ಲಿ ಸುಟ್ಟಿಲ್ಲ, ಆದರೆ ಮುಖದ ಭಾಗದಲ್ಲಿ ಮಾತ್ರ ಸುಟ್ಟಗಾಯಗಳಾಗಿದೆ. ಕೊಲೆಗೆ ಟಿಶ್ಯು ಪೇಪರ್ ಬಳಸಿರಬಹುದೆಂದು ಶಂಕಿಸಿರುವ ಪೊಲೀಸರು, ಯಾವ ರೀತಿಯಲ್ಲಿ ಈ ಕೊಲೆ ನಡೆದಿದೆ ಎಂದು ವಿವರಿಸಲು ವಿಫಲರಾಗಿದ್ದಾರೆ.
ಮಗುವನ್ನು ಎಷ್ಟು ಸಮಯ ಮೈಕ್ರೋವೇವ್ ಓವೆನ್‌ನಲ್ಲಿ ಇಡಲಾಗಿತ್ತು, ದೇಹ ಸಂಪೂರ್ಣ ಸುಡದೆ ಹೇಗೆ ಕೊಲೆ ಮಾಡಲಾಗಿದೆ ಎಂದು ತನಿಖೆ ನಡೆಸಲು ನುರಿತ ತನಿಖಾಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ.