ಅಫ್ಘಾನಿಸ್ತಾನ ಆಸ್ಪತ್ರೆ ಮೇಲೆ ನಡೆದ ಬಾಂಬ್ ದಾಳಿಯಲ್ಲಿ ಸುಮಾರು 60 ಜನರು ಬಲಿಯಾಗಿದ್ದು, 120 ಮಂದಿ ಗಾಯಗೊಂಡಿರುವುದಾಗಿ ಸಾರ್ವಜನಿಕ ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಇದೊಂದು ಹೃದಯಾಘಾತದ ಘಟನೆಯಾಗಿದ್ದು, ಮಕ್ಕಳು, ಮಹಿಳೆ, ಯುವಕರು ಹಾಗೂ ಪುರುಷರು ಸೇರಿದಂತೆ 60 ಜನರು ಹುತಾತ್ಮರಾಗಿದ್ದಾರೆ ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಸೇರಿದಂತೆ 120 ಜನರು ಗಾಯಗೊಂಡಿರುವುದಾಗಿ ಪ್ರಕಟಣೆಯಲ್ಲಿ ವಿವರಿಸಿದೆ.
ಲೋಗಾರ್ ಪ್ರಾಂತ್ಯದ ಅಜ್ರಾ ಜಿಲ್ಲೆಯಲ್ಲಿನ ಆಸ್ಪತ್ರೆಯನ್ನು ಗುರಿಯಾಗಿರಿಸಿ ಆತ್ಮಹತ್ಯಾ ಕಾರ್ ಬಾಂಬ್ ದಾಳಿಕೋರರು ಈ ದುಷ್ಕೃತ್ಯ ಎಸಗಿರುವುದಾಗಿ ಲೋಗಾರ್ ಪ್ರಾಂತ್ಯದ ವಕ್ತಾರ ಡಿನ್ ಮೊಹಮ್ಮದ್ ಡಾರ್‌ವೈಶ್ ತಿಳಿಸಿದ್ದಾರೆ.
ಕಾರ್ ಡ್ರೈವರ್ ತನ್ನನ್ನು ತಾನೇ ಸ್ಫೋಟಿಸಿಕೊಂಡು ಈ ದಾಳಿ ನಡೆಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೇ ಆಸ್ಪತ್ರೆಯೊಳಗೆ ಗಾಯಗೊಂಡಿರುವವರನ್ನು ಹೊರತೆಗೆಯುವ ನಿಟ್ಟಿನಲ್ಲಿ ವಿದೇಶಿ ಪಡೆಗಳ ನೆರವು ಕೋರಿರುವುದಾಗಿ ಲೋಗಾರ್ ಪ್ರಾಂತ್ಯದ ಕೌನ್ಸಿಲ್ ಮುಖ್ಯಸ್ಥ ಅಬ್ದುಲ್ ವಾಲಿ ವಾಖೀಲ್ ಹೇಳಿದ್ದಾರೆ.