ಸರ್ವಾಧಿಕಾರಿ ಮುಅಮ್ಮರ್ ಗಡಾಫಿ ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ಜಾರಿಗೊಳಿಸಿದ್ದ ಬಂಧನದ ವಾರಂಟ್ ಅನ್ನು ಲಿಬಿಯಾ ಮಂಗಳವಾರ ತಿರಸ್ಕರಿಸಿದೆ.
ತೃತೀಯ ಜಗತ್ತಿನ ನಾಯಕರನ್ನ ಹತ್ಯೆಗೈಯುವ ಪಾಶ್ಚಾತ್ಯ ರಾಷ್ಟ್ರದ ಈ ವರಸೆಯ ಹಿನ್ನೆಲೆಯಲ್ಲಿ ಲಿಬಿಯಾ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್‌ನ ನಿರ್ಧಾರವನ್ನು ನಾವು ಯಾವುದೇ ಕಾರಣಕ್ಕೂ ಸ್ವೀಕರಿಸುವುದಿಲ್ಲ ಎಂದು ಕಾನೂನು ಸಚಿವ ಮೊಹಮ್ಮದ್ ಅಲ್ ಖ್ವಾಮೂದಿ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ಕ್ರಾಂತಿಕಾರಿ ಮುಖಂಡ ಗಡಾಫಿ ಮತ್ತು ಅವರ ಪುತ್ರ ಲಿಬಿಯಾ ಸರಕಾರದ ಯಾವುದೇ ಅಧಿಕೃತ ಹುದ್ದೆಯನ್ನು ಅಲಂಕರಿಸಿಲ್ಲ. ಅಲ್ಲದೇ ಐಸಿಸಿ ಹೇಳಿದಂತೆ ಅವರು ಯಾವುದೇ ಆರೋಪಗಳನ್ನೂ ಎಸಗಿಲ್ಲ ಎಂದು ವಿವರಿಸಿದ್ದಾರೆ.
ಮಾನವೀಯತೆ ಮರೆತು ಜನರನ್ನು ಹತ್ಯೆಗೈದಿರುವ ಆರೋಪದಡಿಯಲ್ಲಿ ಹೇಗ್ ಮೂಲದ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ಗಢಾಪಿ ಹಾಗೂ ಆತನ ಪುತ್ರ ಸೈಫ್ ಅಲ್ ಇಸ್ಲಾಮ್, ಗುಪ್ತಚರ ಇಲಾಖೆ ಮುಖ್ಯಸ್ಥ ಅಬ್ದುಲ್ಲಾ ಅಲ್ ಸೆನ್ಸುಸ್ಸಿ ವಿರುದ್ಧ ಬಂಧನದ ವಾರಂಟ್ ಜಾರಿಗೊಳಿಸಿತ್ತು.
ಮೊಅಮ್ಮರ್ ಗಡಾಫಿ ಕಳೆದ 42 ವರ್ಷಗಳಿಂದ ಲಿಬಿಯಾವನ್ನು ಆಳುತ್ತಿದ್ದು,ಸಾಕಷ್ಟು ಭ್ರಷ್ಟಾಚಾರ, ಅಕ್ರಮ ಆಸ್ತಿ ಸಂಪಾದಿಸಿರುವುದಾಗಿ ಆರೋಪಿಸಿ ಜನರು ಫೆಬ್ರುವರಿ ತಿಂಗಳಿನಿಂದ ಬೀದಿಗಿಳಿದು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ತಾನು ಯಾವುದೇ ಕಾರಣಕ್ಕೂ ಅಧ್ಯಕ್ಷಗಾದಿಯಿಂದ ಕೆಳಗಿಳಿಯಲ್ಲ ಎಂಬ ಹಠ ಗಡಾಫಿಯದ್ದಾಗಿದೆ.