ಹೆಜ್ಜೇನಿನಂತೆ ದಾಳಿ ಮಾಡ್ತೀವಿ: ಅಮೆರಿಕಕ್ಕೆ ಗಡಾಫಿ ಎಚ್ಚರಿಕೆ
ಟ್ರಿಪೋಲಿ, ಶನಿವಾರ, 2 ಜುಲೈ 2011( 13:42 IST )
ಲಿಬಿಯಾದ ಮೇಲೆ ನ್ಯಾಟೋ ವೈಮಾನಿಕ ದಾಳಿ ಮುಂದುವರಿಸಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಲಿಬಿಯಾ ಅಧ್ಯಕ್ಷ ಮುವಮ್ಮರ್ ಗಡಾಫಿ, ಇದಕ್ಕೆ ಪ್ರತಿಯಾಗಿ ಯೂರೋಪ್ ಮೇಲೆ ಲಿಬಿಯನ್ನರು "ಹೆಜ್ಜೇನಿನಂತೆ" ದಾಳಿ ನಡೆಸುವುದಾಗಿ ಬೆದರಿಕೆಯೊಡ್ಡಿದ್ದಾನೆ.
ಸರಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಸೇನಾಪಡೆಯಿಂದ ಅಮಾನವೀಯವಾಗಿ ದಾಳಿ ನಡೆಸಿದ ಆಪಾದನೆಯ ಮೇರೆಗೆ ಅಂತಾರಾಷ್ಟ್ರಿಯ ಅಪರಾಧ ನ್ಯಾಯಾಲಯವು ಗಡಾಫಿಗೆ ಸೋಮವಾರ ವಾರೆಂಟ್ ಜಾರಿಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ ಲಿಬಿಯಾ ರಾಜಧಾನಿ ಟ್ರಿಪೋಲಿಯಲ್ಲಿ ಭಾರೀ ಸಮಾವೇಶವನ್ನು ಅಜ್ಞಾತ ಸ್ಥಳದಿಂದಲೇ ಆಯೋಜಿಸಿದ್ದ ಗಡಾಫಿಯ ಮಾತುಗಳನ್ನು ಅಭಿಮಾನಿಗಳೆದುರು ಬಿತ್ತರಿಸಲಾಗಿತ್ತು. ಇಲ್ಲಿ ಸೇರಿದ ಅಭಿಮಾನಿಗಳ ಬಳಗವನ್ನು ನೋಡಿದರೆ, ಲಿಬಿಯಾದಲ್ಲಿ ಗಡಾಫಿ ಹಿಡಿತ ಇನ್ನೂ ಎಷ್ಟು ಪ್ರಬಲವಾಗಿದೆ ಎಂಬುದು ಅರ್ಥವಾಗುತ್ತಿತ್ತು.
ಗಡಾಫಿ ಬೆಂಬಲಿಗರು ಟ್ರಿಪೋಲಿಯ ಗ್ರೀನ್ ಸ್ಕ್ವೇರ್‌ನಲ್ಲಿ ರ‌್ಯಾಲಿನಡೆಸುತ್ತಿದ್ದ ಸಂದರ್ಭದಲ್ಲಿ ನ್ಯಾಟೋ ಪಡೆಗಳು ವೈಮಾನಿಕ ದಾಳಿ ನಡೆಸಿದ್ದರಿಂದ ಬೆಂಬಲಿಗರು ಚೆಲ್ಲಾಪಿಲ್ಲಿಯಾಗಿದ್ದರು. ಈ ಘಟನೆಯ ನಂತರ ಅಜ್ಞಾತ ಸ್ಥಳವೊಂದರಿಂದ ಮಾತನಾಡಿದ ಗಡಾಫಿ, ನ್ಯಾಟೋ ಪಡೆಗಳ ಬಾಂಬ್ ದಾಳಿಗೆ ಲಿಬಿಯಾ ಜನರು ಪ್ರತೀಕಾರ ತೆಗೆದುಕೊಳ್ಳಲಿದ್ದಾರೆ ಎಂದು ಎಚ್ಚರಿಸಿದ್ದಾರೆ. ನಮ್ಮ ಮನೆಯ ಮೇಲೆ ದಾಳಿ ನೀವು ದಾಳಿ ನಡೆಸಿದಂತೆಯೇ ಮುಂದೊಂದು ದಿನ ನಾವು ನಿಮ್ಮ ಮನೆ, ಕಚೇರಿ ಹಾಗೂ ಕುಟುಂಬಗಳ ಮೇಲೆ ದಾಳಿ ನಡೆಸುತ್ತೇವೆ ಎಂದು ಆಕ್ರೋಶ ಭರಿತರಾಗಿ ಹೇಳಿದ್ದಾರೆ.
ಈ ಹಿಂದೆ ಗಡಾಫಿ ಐಆರ್ಎ ಹಾಗೂ ಕೆಲವು ಪ್ಯಾಲಿಸ್ತೀನ್ ಉಗ್ರಗಾಮಿ ಸಂಘಟನೆ ಸೇರಿದಂತೆ ಹಲವಾರು ಉಗ್ರಗಾಮಿ ಸಂಘಟನೆಗಳಿಗೆ ಬೆಂಬಲ ನೀಡಿದ್ದನೆನ್ನಲಾಗಿದೆ. 1986ರಲ್ಲಿ ನಡೆದ ಬರ್ಲಿನ್ ಡಿಸ್ಕೋ ಬಾಂಬ್ ಪ್ರಕರಣ ಹಾಗೂ ಸ್ಕಾಟ್ಲೆಂಡ್‌ನ ಲಾಕರ್‌ಬಿನಲ್ಲಿ ಉಗ್ರರು ವಿಮಾನವನ್ನು ಹೊಡೆದುರುಳಿಸಿದ ಘಟನೆಯಲ್ಲಿ 270 ಜನರು ಮೃತಪಟ್ಟಿದ್ದು, ಈ ಪೈಕಿ ಬಹುತೇಕ ಮಂದಿ ಅಮೆರಿಕ ನಾಗರಿಕರಾಗಿದ್ದರು, ಈ ದಾಳಿಗೆ ಲಿಬಿಯಾ ಹೊಣೆ ಹೊತ್ತಿತ್ತು.
ಇತ್ತೀಚಿನ ವರ್ಷಗಳಲ್ಲಿ ಗಡಾಫಿ ಯೂರೋಪ್ ಮತ್ತು ಅಮೆರಿಕದೊಂದಿಗೆ ರಾಜಿಗೆ ಮುಂದಾಗಿದ್ದ ಸಂದರ್ಭದಲ್ಲಿ ಉಗ್ರಗಾಮಿ ಬಣಗಳೊಂದಿಗೆ ನಂಟು ಕಳಚಿಕೊಂಡಿದ್ದಾನೆ ಎಂದು ನಂಬಲಾಗಿತ್ತು. ಈ ಕಾರಣಕ್ಕಾಗಿಯೇ ಅಲ್ ಖಾಯಿದಾ ಮತ್ತು ಇತರ ಜಿಹಾದಿ ಬಣಗಳು ಗಡಾಫಿಯನ್ನು ವಿರೋಧಿಸುತ್ತಿದ್ದವು. 1990ರ ಅವಧಿಯಲ್ಲಿ ಗಡಾಫಿ ಆಡಳಿತದ ಬದಲು ಇಸ್ಲಾಮಿಕ್ ರಾಷ್ಟ್ರ ಸ್ಥಾಪನೆಗಾಗಿ ಹೋರಾಡುತ್ತಿದ್ದ ಲಿಬಿಯನ್ ಇಸ್ಲಾಮಿಕ್ ಹೋರಾಟದ ಗುಂಪನ್ನು ಮಟ್ಟ ಹಾಕಲು ಗಡಾಫಿ ಪ್ರಯತ್ನಿಸಿದ್ದ.
ಈ ಮಧ್ಯೆ, ಗಡಾಫಿ ಹೇಳಿಕೆಯನ್ನು ಅಮೆರಿಕವು ಗಂಭೀರವಾಗಿ ಪರಿಗಣಿಸಲಿದೆ ಎಂದು ಅಮೆರಿಕ ಸರಕಾರಿ ಅಧಿಕಾರಿ ಮಾರ್ಕ್ ಟೋನರ್ ಹೇಳಿದ್ದಾರೆ. ಆದರೆ ಗಡಾಫಿ ನಡೆಸಲಿರುವ ದಾಳಿಯ ಕುರಿತು ಗುಪ್ತಚರ ಸಂಸ್ಥೆಗಳು ಯಾವುದೇ ಮಾಹಿತಿ ನೀಡಿಲ್ಲ ಎಂದು ಅವರು ಹೇಳಿದ್ದಾರೆ.