ಎರಡು ವರ್ಷದ ಬಾಲಕಿಯೊಬ್ಬಳು ಆಟವಾಡುತ್ತಿದ್ದಾಗ 10ನೇ ಮಹಡಿಯಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದರೂ ಅದೇ ಸಮಯದಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬಳು ಕೂಡಲೇ ಮಗುವನ್ನು ಹಿಡಿದುಕೊಂಡಿದ್ದರಿಂದ ಪವಾಡ ಸದೃಶವಾಗಿ ಬದುಕುಳಿದ ಘಟನೆ ಹ್ಯಾಂಗ್‌ಝೋ ನಗರದಲ್ಲಿ ನಡೆದಿದೆ.
ಬಾಲಕಿಗೆ ಆಂತರಿಕ ರಕ್ತ ಸ್ರಾವ ಹಾಗೂ ಗಾಯಗಳಾಗಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ. ಬಾಲಕಿಯನ್ನು ರಕ್ಷಿಸಲು ಧಾವಿಸಿದ ಮಹಿಳೆಯ ತೋಳಿನ ಮೂಳೆ ಮುರಿದಿದೆ ಎಂದು ಚೀನಾ ಸೆಂಟ್ರಲ್ ಟೆಲಿವಿಷನ್ (ಸಿಸಿಟಿವಿ) ಹಾಗೂ ಕ್ಸಿನ್‌ಹುವಾ ಸುದ್ದಿ ಸಂಸ್ಥೆ ತಿಳಿಸಿದೆ.
ನಿಯು ನಿಯು ಎಂಬ ಅಡ್ಡ ಹೆಸರಿನಿಂದ ಕರೆಯಲಾಗುವ ಝಾಂಗ್ ಫಾಂಗ್ಯುಳನ್ನು ಆಕೆಯ ಅಜ್ಜಿ ನೋಡಿಕೊಳ್ಳುತ್ತಿದ್ದಳು. ಅಜ್ಜಿ ಮನೆಯಿಂದ ಹೊರಗೆ ತೆರಳಿದಾಗ ಬಾಲಕಿ ಆಕಸ್ಮಿಕವಾಗಿ ಕಿಟಕಿಯಿಂದ ಉರುಳಿ ಬೀಳುತ್ತಿರುವುದನ್ನು ನೆರೆ ಮನೆಯವರು ನೋಡಿದರು. ಇದೇ ರಸ್ತೆಯಲ್ಲಿ ಹೋಗುತ್ತಿದ್ದ ವ್ಯೂ ಜುಪಿಂಗ್ ಎಂಬ ಮಹಿಳೆಯೂ ಗಮನಿಸಿದಳು. ತನ್ನ ಹೈ ಹೀಲ್ಡ್ ಬೂಟನ್ನು ಬಿಸಾಡಿ ನೆರವಿಗೆ ಧಾವಿಸಿದಳು. ಬಾಲಕಿ ಬಿದ್ದ ರಭಸಕ್ಕೆ ವ್ಯೂಳ ಕೈ ತೋಳಿನ ಮೂಳೆ ಮುರಿದಿದೆ. ಆದರೂ ಬಾಲಕಿಯ ಜೀವ ಉಳಿಸಿದ ಹೆಮ್ಮೆ ಆಕೆಗಿದೆ.
ಬಾಲಕಿಯ ಆರೋಗ್ಯ ತಪಾಸಣೆ ನಡೆಸಿದ ಜೀ ಜಿಯಾಂಗ್ ಮಕ್ಕಳ ಆಸ್ಪತ್ರೆಯ ವೈದ್ಯರು ಆಕೆಯ ಮೆದುಳಿಗೆ ಯಾವುದೇ ಹಾನಿಯಾಗಿಲ್ಲ ಎಂಬುದು ಸ್ಕ್ಯಾನಿಂಗ್‌ನಿಂದ ತಿಳಿದು ಬಂದಿದೆ, ಬಾಲಕಿಯ ಹೊಟ್ಟೆ ಊದಿಕೊಂಡಿದ್ದು, ಗಾಯವಾಗಿರುವ ಸಾಧ್ಯತೆಯಿದೆ ಎಂದು ತಿಳಿಸಿರುವುದಾಗಿ ಸಿಸಿಟಿವಿ ವರದಿ ಮಾಡಿದೆ.