ಪತ್ರಕರ್ತ ಸೈಯದ್ ಸಲೀಂ ಶಹಜಾದ್ ಹತ್ಯೆಗೆ ಐಎಸ್‌ಐ ಆದೇಶ ನೀಡಿದೆ ಎಂದು ಅಮೆರಿಕ ಅಧಿಕಾರಿಗಳು ಹೊಸ ಆರೋಪ ಮಾಡಿರುವುದು ದೇಶದ ಭಧ್ರತಾ ಪಡೆಗಳನ್ನು ದೂಷಿಸುವ 'ಅಂತಾರಾಷ್ಟ್ರೀಯ ಒಳಸಂಚು' ಎಂದು ಪಾಕಿಸ್ತಾನ ಆಪಾದಿಸಿದೆ.
ಕಾನೂನು ಪಾಲಿಸುವ ಸಂಸ್ಥೆಗಳು ಹಾಗೂ ಭದ್ರತಾ ಪಡೆಗಳ ಮೇಲೆ ಆರೋಪ ಹೊರಿಸುವ ಮೂಲಕ ಅಂತಾರಾಷ್ಟ್ರೀಯ ಒಳಸಂಚು ರೂಪಿಸಲಾಗಿದೆ ಎಂದು ಸಾರ್ಕ್ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ ಪಾಕಿಸ್ತಾನದ ವಾರ್ತಾ ಸಚಿವೆ ಫಿರ್ದೋಸ್ ಆಶಿಕ್ ಅವಾನ್ ಸುದ್ದಿಗಾರರಿಗೆ ತಿಳಿಸಿದರು.
ಪಾಕ್ ಸೇನೆಯ ವಿರುದ್ಧದ ಟೀಕೆಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಪಾಕ್ ಗುಪ್ತಚರ ಸಂಸ್ಥೆ ಐಎಸ್ಐ, ಪತ್ರಕರ್ತ ಸಲೀಂ ಶಹಜಾದ್ ಹತ್ಯೆಗೆ ಆದೇಶ ನೀಡಿದ್ದು ಗುಪ್ತಚರ ಮಾಹಿತಿಗಳಿಂದ ಲಭ್ಯವಾಗಿದೆ ಎಂಬ ಒಬಾಮಾ ಆಡಳಿತ ಹಿರಿಯ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿತ್ತು. ಈ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಇದೊಂದು ಅಂತಾರಾಷ್ಟ್ರೀಯ ಒಳಸಂಚು ಎಂದಷ್ಟೇ ಹೇಳಿದರು.
ಪಾಕ್ ಮತ್ತು ಅಮೆರಿಕ ಬಾಂಧವ್ಯದ ಕುರಿತು ಪ್ರಸ್ತುತ ಉಂಟಾಗಿರುವ ಬಿಕ್ಕಟ್ಟಿನ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಯಾವುದೇ ದೇಶಗಳ ನಡುವಿನ ಸ್ನೇಹವು ದ್ವಿಪಕ್ಷೀಯ ವಿಷಯವಾಗಿರುತ್ತದೆ. ಪ್ರತಿಯೊಬ್ಬರೂ ತಮ್ಮ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುತ್ತಾರೆ. ಹಿತಾಸಕ್ತಿಗಳ ನಡುವೆ ಭಿನ್ನಾಭಿಪ್ರಾಯ ಬಂದಾಗ ಇಂತಹಾ ಘಟನೆಗಳು ನಡೆಯುತ್ತವೆ ಎಂದು ಹೇಳಿದರು.