ರಕ್ಷಣೆ ನೀಡುವುದಾಗಿ ಭರವಸೆ ನೀಡಿದರೆ ಮಾತ್ರ ಅಧಿಕಾರದಿಂದ ಕೆಳಗಿಳಿಯಲು ಸಿದ್ಧ ಎಂದು ಲಿಬಿಯಾ ಅಧ್ಯಕ್ಷ ಮುವಮ್ಮರ್ ಗಡಾಫಿ ಹೇಳಿರುವುದಾಗಿ ರಷ್ಯಾದ ಅಧಿಕಾರಿಯೊಬ್ಬರು ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿ ಕೊಮ್ಮರ್‌ಸಂಟ್ ಬ್ಯುಸಿನೆಸ್ ಡೈಲಿ ಮಂಗಳವಾರ ವರದಿ ಮಾಡಿದೆ.
ನ್ಯಾಟೋ ಮುಖ್ಯಸ್ಥ ಆಂಡರ್ಸ್ ಫಾಗ್ ರಾಸ್‌ಮ್ಯುಸೆನ್ ಅವರು ರಷ್ಯಾ ಅಧ್ಯಕ್ಷ ಡಿಮಿಟ್ರೀ ಮೆಡ್ವಡೀವ್ ಅವರೊಂದಿಗೆ ಲಿಬಿಯಾ ಬೆಳವಣಿಗೆಗಳ ಕುರಿತು ಚರ್ಚಿಸಿದ ಮರುದಿನ ಈ ವಿಷಯ ಹೊರಬಿದ್ದಿದೆ. 'ಈ ಸಂದರ್ಭದಲ್ಲಿ ಲಿಬಿಯಾ ಅಧ್ಯಕ್ಷ ಮುವಮ್ಮರ್ ಗಡಾಫಿ, ತನಗೆ ರಕ್ಷಣೆ ನೀಡುವುದಾಗಿ ಭರವಸೆ ನೀಡಿದರೆ ಮಾತ್ರ ಅಧಿಕಾರದಿಂದ ಕೆಳಗಿಳಿಯುವುದಾಗಿ ಸಂದೇಶ ಕಳುಹಿಸಿದ್ದರು' ಎಂದು ರಷ್ಯಾ ಅಧಿಕಾರಿಯೊಬ್ಬರು ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.
ಗಡಾಫಿ ಅವರ ಕುಟುಂಬದ ಮುಟ್ಟುಗೋಲು ಹಾಕಿಕೊಳ್ಳಲಾಗಿರುವ ಕೆಲವು ಬ್ಯಾಂಕ್ ಖಾತೆಗಳನ್ನು ಬಿಡುಗಡೆಗೊಳಿಸಲು ಹಾಗೂ ಹೇಗ್‌ನಲ್ಲಿರುವ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಲ್ಲಿ ನಡೆಯಲಿರುವ ವಿಚಾರಣೆಯಿಂದ ಪಾರಾಗಲು ಗಡಾಫಿಗೆ ಸಹಕರಿಸುವುದಾಗಿ ಫ್ರಾನ್ಸ್ ಉತ್ಸಾಹದಿಂದಿದೆ ಎಂಬ ಅಂಶವನ್ನೂ ರಷ್ಯಾ ಮೂಲಗಳು ತಿಳಿಸಿವೆ.
ಸೋಚಿ ನಗರದಲ್ಲಿರುವ ಬ್ಲ್ಯಾಕ್ ಸೀ ರೆಸಾರ್ಟ್‌ನಲ್ಲಿ ಆಯೋಜಿಸಿದ್ದ ಶೃಂಗ ಸಭೆಯಲ್ಲಿ ರಷ್ಯಾ ಅಧ್ಯಕ್ಷ ಮೆಡ್ವಡೀವ್ ಹಾಗೂ ನ್ಯಾಟೋ ಮುಖ್ಯಸ್ಥರು ಲಿಬಿಯಾ ಕುರಿತು ಚರ್ಚೆ ನಡೆಸುತ್ತಿದ್ದ ಸಂದರ್ಭದಲ್ಲಿ ಭಿನ್ನಾಭಿಪ್ರಾಯವುಂಟಾಗಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಲಿಬಿಯಾ ವಿರುದ್ಧ ಪ್ರಚಾರ ನಡೆಸುತ್ತಿರುವುದಕ್ಕೆ ರಷ್ಯಾ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಲಿಬಿಯಾ ಸರಕಾರ ಭರವಸೆ ದೊರೆತರೆ ಅಲ್ಲಿ ಕೂಡಲೇ ಕದನ ವಿರಾಮ ಘೋಷಿಸಬೇಕು ಎಂದು ರಷ್ಯಾ ಆಗ್ರಹಿಸಿರುವುದಾಗಿ ನ್ಯಾಟೋ ಹೇಳಿತ್ತು.