ತಾವು ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರೊಂದಿಗೆ ಯಾವುದೇ ಪ್ರಣಯ ಸಂಬಂಧ ಹೊಂದಿರಲಿಲ್ಲ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ರಾಜಕಾರಣಿ ಇಮ್ರಾನ್ ಖಾನ್ ಹೇಳಿದ್ದಾರೆ. ಈ ಕುರಿತು ಅವರು ತಮ್ಮ ಆತ್ಮ ಚರಿತ್ರೆಯಲ್ಲಿ ಅವರು ಸ್ಪಷ್ಟಪಡಿಸಿದ್ದಾರೆ.
'ನನ್ನ ಸಹೋದರ ಸಂಬಂಧಿಯೊಬ್ಬ ಭುಟ್ಟೋರನ್ನು ಇಷ್ಟಪಟ್ಟಿದ್ದ, ನಾನು ಅವರಿಬ್ಬರನ್ನೂ ಪರಸ್ಪರ ಪರಿಚಯ ಮಾಡಿಸಿದಾಗ ಆಕೆಯೂ ಆತನ ಬಗ್ಗೆ ಒಲವು ತೋರಿಸಿದ್ದರು. ಒಂದು ಹಂತದಲ್ಲಿ ಇದು ಮದುವೆಯ ಹಂತದವರೆಗೂ ಬಂದಿತ್ತು' ಎಂದು ಖಾನ್ ತಮ್ಮ ಜೀವನ ಚರಿತ್ರೆ ಬರೆಯುತ್ತಿರುವ ಭಾರತೀಯ ಬರಹಗಾರ ಫ್ರಾಂಕ್ ಹುಜೂರ್ ಅವರಿಗೆ ಹೇಳಿದ್ದಾರೆ.
ಭುಟ್ಟೋ ನನ್ನ 'ಆತ್ಮೀಯ ಸ್ನೇಹಿತೆ' ಹಾಗೂ ನಮ್ಮಿಬ್ಬರ ನಡುವೆ ಪರಸ್ಪರರ ಬಗೆಗೆ ಮೆಚ್ಚುಗೆಯಿತ್ತು ಎಂದು ತೆಹ್ರೀಕ್ ಎ ಇನ್ಸಾಫ್ ಪಾರ್ಟಿಯ ಮುಖ್ಯಸ್ಥರಾಗಿರುವ ಇಮ್ರಾನ್ ಖಾನ್ ಹೇಳಿದ್ದಾರೆ.
ಎರಡು ವರ್ಷದ ಹಿಂದೆ ಕ್ರಿಸ್ಟೋಫರ್ ಸ್ಯಾಂಡ್‌ಫೋರ್ಡ್ ಎಂಬವರು ಬರೆದಿದ್ದ ಖಾನ್ ಜೀವನ ಚರಿತ್ರೆಯಲ್ಲಿ, 1970ರಲ್ಲಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾಗಿದ್ದಾಗಲೇ ಖಾನ್ ಮತ್ತು ಭುಟ್ಟೋ ಅವರ ಜೋಡಿ ಅತ್ಯಂತ ನಿಕಟವಾಗಿತ್ತು, ಅವರು ದೈಹಿಕ ಸಂಪರ್ಕ ಹೊಂದಿರುವ ಸಾಧ್ಯತೆಗಳೂ ಇದ್ದಿರಬಹುದು ಎಂದು ಹೇಳಿದ್ದರು. ಖಾನ್ ಅವರ ತಾಯಿ ಇವರಿಬ್ಬರ ಮದುವೆಗೂ ಯತ್ನಿಸಿದ್ದರು ಎಂಬ ಅಂಶವನ್ನು ಸ್ಯಾಂಡ್‌ಫೋರ್ಡ್ ಹೇಳಿದ್ದರು.
ಬೆನಜೀರ್ ಅವರು ಪ್ರಥಮ ಮುಸ್ಲಿಂ ಮಹಿಳಾ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಾಗ ನನ್ನ ಸ್ನೇಹಿತೆಯೊಬ್ಬಳು ಅಧಿಕಾರಕ್ಕಾಗಿ ಕಿತ್ತಾಡುವ ರಾಜಕೀಯದ ಮಬ್ಬು ಕತ್ತಲೆಯಲ್ಲಿ ಕಳೆದು ಹೋದಳು ಎಂದು ನನಗನ್ನಿಸಿತ್ತು ಎಂದು "ಇಮ್ರಾನ್ ವರ್ಸಸ್ ಇಮ್ರಾನ್" ಕೃತಿಯಲ್ಲಿ ಖಾನ್ ಹೇಳಿಕೊಂಡಿದ್ದರು.