ಪಾಕಿಸ್ತಾನದ ರಾವಲ್ಪಿಂಡಿಯ ಸೇನಾ ನೆಲೆಯಲ್ಲಿ ಸೋಮವಾರ ಮೂರು ಕಡೆಗಳಲ್ಲಿ ಸರಣಿ ಸ್ಫೋಟ ಸಂಭವಿಸಿದ್ದು, ಇನ್ನೊಂದೆಡೆ ರಾಜಕೀಯ ಹತ್ಯಾ ಪ್ರಕರಣದ ಮುಂದುವರಿದ ಭಾಗವಾಗಿ ಇಸ್ಲಾಮಾಬಾದಿನಲ್ಲಿ ನಡೆದ ಬಾಂಬ್ ಸ್ಪೋಟದಲ್ಲಿ ಆರು ಮಂದಿ ಬಲಿಯಾಗಿದ್ದಾರೆ.
ಪಾಕಿಸ್ತಾನದ ಅಣ್ವಸ್ತ್ರ ಯೋಜನೆಗೆ ಸಂಬಂಧಿಸಿದ ಹಲವಾರು ಕಚೇರಿಗಳು, ಸರಕಾರಿ ಕಚೇರಿಗಳು, ಪೊಲೀಸ್ ತರಬೇತಿ ಕೇಂದ್ರ ಮುಂತಾದವುಗಳಿರುವ, ಸೇನಾ ನಗರ ರಾವಲ್ಪಿಂಡಿಯಿಂದ ಸುಮಾರು 20 ಕಿಲೋ ಮೀಟರ್ ದೂರ ಇರುವ ಸಿಹಾಲ ಶಸ್ತ್ರಾಸ್ತ್ರ ಡಿಪೋ ಪ್ರದೇಶದಲ್ಲೇ ಕನಿಷ್ಠ 3 ಕಡೆ ಸ್ಫೋಟಗಳು ಸಂಭವಿಸಿವೆ. ಈಗ ಅಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಫೋಟದಿಂದಾಗಿ ಕಟ್ಟಡಗಳಿಗೆ ಹಾನಿಯಾಗಿದ್ದು, ಬೆಂಕಿಯ ಕೆನ್ನಾಲಿಗೆ ಚಾಚಿದೆ. ಈ ಪ್ರದೇಶಕ್ಕೆ ತೆರಳದಂತೆ ಸಾರ್ವಜನಿಕರು ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಪೊಲೀಸರು ಹಾಗೂ ಸೇನಾ ಸಿಬ್ಬಂದಿ ನಿರ್ಬಂಧಿಸಿದರು ಎನ್ನಲಾಗಿದೆ.
ಸ್ಫೋಟ ಸ್ಥಳದಿಂದ ಹತ್ತಿರದ ಸೇನಾ ಆಸ್ಪತ್ರೆಗಳಿಗೆ ಹಲವಾರು ಆಂಬ್ಯುಲೆನ್ಸ್‌ಗಳು ಹೋಗುತ್ತಿರುವುದನ್ನು ಸಾರ್ವಜನಿಕರು ಗಮನಿಸಿದ್ದಾರೆ. ಈ ಸ್ಫೋಟದಲ್ಲಿ ಕನಿಷ್ಠ ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ರಾಜಕೀಯ ಹತ್ಯೆ ಇನ್ನೊಂದೆಡೆ, ಈಶಾನ್ಯ ಪಾಕಿಸ್ತಾನದಲ್ಲಿ ಸೋಮವಾರ ನಡೆಯುತ್ತಿದ್ದ ಪಿಎಂಎಲ್ ಕ್ಯೂ ಪಕ್ಷ ರ‌್ಯಾಲಿ ನಡೆಸುತ್ತಿದ್ದ ಸಂದರ್ಭದಲ್ಲಿ ಆತ್ಮಹತ್ಯಾ ಬಾಂಬ್ ದಾಳಿ ನಡೆದಿದ್ದರಿಂದ ಕನಿಷ್ಠ 6 ಜನರು ಮೃತಪಟ್ಟಿದ್ದು,19 ಜನರು ಗಾಯಗೊಂಡಿದ್ದಾರೆ.
ಕೇಂದ್ರದಲ್ಲಿ ಆಡಳಿತಾರೂಢ ಸಮ್ಮಿಶ್ರ ಸರಕಾರದ ಅಂಗ ಪಕ್ಷವಾಗಿರುವ ಪಿಎಂಎಲ್‌ಕ್ಯೂ ಪಕ್ಷದ ರ‌್ಯಾಲಿಗೆ ಸಿದ್ಧತೆ ನಡೆಸಲಾಗುತ್ತಿದ್ದು, ಪಕ್ಷದ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಅಮೀರ್ ಮುಕಾಮ್ ಅವರು ಈ ಸಂದರ್ಭದಲ್ಲಿ ಮಾತನಾಡಲಿದ್ದರು, ಈ ಸಂದರ್ಭದಲ್ಲೇ ಆತ್ಮಹತ್ಯಾ ಬಾಂಬ್ ದಾಳಿ ನಡೆದಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬ ತಿಳಿಸಿದ್ದಾನೆ.
ಬಾಂಬ್ ದಾಳಿಯಿಂದ ನೀರು ಸರಬರಾಜು ಹಾಗೂ ವಿದ್ಯುಚ್ಛಕ್ತಿ ಕಚೇರಿಗೆ ಹಾನಿಯಾಗಿದ್ದು, ಮೂರು ಮಂದಿ ಪೊಲೀಸರು ಸೇರಿದಂತೆ 6 ಜನರು ಮೃತಪಟ್ಟಿದ್ದಾರೆ. ಪಕ್ಷದ ಹಿರಿಯ ಮುಖಂಡ ಅಮೀರ್ ಮಕಾಮ್ ಅವರು ಬಾಂಬ್ ದಾಳಿ ಸಂದರ್ಭದಲ್ಲಿ ಹಾಜರಿರಲಿಲ್ಲ ಎಂದು ಪಕ್ಷದ ಕಾರ್ಯಕರ್ತರು ತಿಳಿಸಿದ್ದಾರೆ.