ಭಾರತದಲ್ಲಿ ಪ್ರತಿಬಾರಿಯೂ ಉಗ್ರರು ವಿಧ್ವಂಸಕ ಕೃತ್ಯ ನಡೆಸಿದಾಗಲೆಲ್ಲಾ ಪಾಕಿಸ್ತಾನದತ್ತಲೇ ಬೊಟ್ಟು ಮಾಡಲಾಗುತ್ತಿತ್ತು. ಆದರೆ ಇತ್ತೀಚೆಗೆ ಮುಂಬೈನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಕ್ಕೆ ಪಾಕ್ ಕೈವಾಡದ ಕುರಿತು ಯಾವುದೇ ಪ್ರಸ್ತಾಪ ಮಾಡದೇ ಇರುವುದರಿಂದ ಪ್ರಧಾನಿ ಸೈಯದ್ ಯೂಸುಫ್ ರಾಜಾ ಗಿಲಾನಿ ಕೊಂಚ ನಿರಾಳರಾಗಿದ್ದಾರೆ. ಭಯೋತ್ಪಾದನೆ ನಿಗ್ರಹಕ್ಕಾಗಿ ಭಾರತ ಹಾಗೂ ಪಾಕಿಸ್ತಾನ ಕಾರ್ಯ ಪ್ರವೃತ್ತರಾಗಬೇಕು ಎಂಬುದನ್ನು ಇಂತಹಾ ಪ್ರಕರಣಗಳು ಸೂಚಿಸುತ್ತವೆ ಎಂದು ಹೇಳಿದ್ದಾರೆ.
ಪಾಕಿಸ್ತಾನದ ಅಣ್ವಸ್ತ್ರ ಸಂಪತ್ತನ್ನು ನಿಯಂತ್ರಿಸುವ ನ್ಯಾಷನಲ್ ಕಮಾಂಡ್ ಅಥಾರಿಟಿಯಲ್ಲಿ ಮಾತನಾಡಿದ ಗಿಲಾನಿ, ಮುಂಬೈ ಬಾಂಬ್ ಸ್ಪೋಟವನ್ನು ತೀವ್ರವಾಗಿ ಖಂಡಿಸಿದರು. ಮುಂಬೈ ದಾಳಿಯ ಕುರಿತು ಪಾಕಿಸ್ತಾನದ ರಾಜಕೀಯ ಪಕ್ಷಗಳ ಮುಖಂಡರು ಖಂಡಿಸಿದ್ದು ಟಿವಿ ಚಾನಲ್‌ಗಳು ಹಾಗೂ ಪತ್ರಿಕೆಗಳಲ್ಲಿ ಪ್ರಮುಖ ಸುದ್ದಿಯಾಗಿತ್ತು.
ಈ ಕುರಿತು ಸಾರ್ವಜನಿಕ ಸಭೆಯೊಂದರಲ್ಲಿ ಪ್ರತಿಕ್ರಿಯಿಸಿರುವ ಇನ್ಸ್‌ಟಿಟ್ಯೂಟ್ ಆಫ್ ಸ್ಟ್ರಾಟಜಿಕ್ ಸ್ಟಡೀಸ್‌ನ ಡೈರೆಕ್ಟರ್ ಜನರಲ್ ಅಶ್ರಫ್ ಜಹಾಂಗೀರ್ ಖಾಜಿ, ಮುಂಬೈನಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಮುಂಬೈ ಸ್ಪೋಟಕ್ಕೆ ಪಾಕ್ ನಂಟಿರುವ ಸಾಧ್ಯತೆಯಿದ್ದು, ಇದು ಉಭಯ ದೇಶಗಳ ನಡುವೆ ನಡೆಯುತ್ತಿರುವ ಮಾತುಕತೆಗೆ ಧಕ್ಕೆಯುಂಟು ಮಾಡಬಹುದು ಎಂದು ಹೇಳಿದ್ದಾರೆ.
ಏತನ್ಮಧ್ಯೆ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ 2009ರಲ್ಲಿ ನಡೆದ ದಾಳಿಯ ಸಂಚು ರೂಪಿಸಿದ್ದ ಆಪಾದನೆಯ ಮೇಲೆ ಬಂಧಿತನಾಗಿದ್ದ ಲಷ್ಕರ್ ಇ ಜಾಂಘ್ವಿ ಸಂಘಟನೆಯ ಮುಖ್ಯಸ್ಥ ಮಲಿಕ್ ಇಶಾಕ್‌ನನ್ನು ಲಾಹೋರ್‌ನ ಕೋಟ್ ಲಾಕ್‌ಪಟ್ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಜೈಲಿನಿಂದ ಹೊರಬಂದ ಇಶಾಕ್‌ನನ್ನು ಆತನ ಬೆಂಬಲಿಗರು ಹೂಗುಚ್ಛ ನೀಡಿ ಸ್ವಾಗತಿಸಿದ ದೃಶ್ಯವನ್ನು ಟೀವಿ ವಾಹಿನಿಗಳು ಪ್ರಸಾರ ಮಾಡಿದ್ದವು.