ಪಕ್ಕದ ಮನೆಯ ಕಾಲೇಜು ಹುಡುಗರೊಂದಿಗೆ ತನ್ನ ಮಕ್ಕಳು ಸಂಬಂಧ ಹೊಂದಿದ್ದಾರೆ ಎಂದು ಶಂಕಿಸಿದ ವ್ಯಕ್ತಿಯೊಬ್ಬ ತನ್ನ ಆರು ಪುತ್ರಿಯರನ್ನು ಗುಂಡಿಕ್ಕಿ ಕೊಂದ ಹೃದಯ ವಿದ್ರಾವಕ ಘಟನೆ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ.
ಆರಿಫ್ ಮುಬಾಶಿರ್ ತನ್ನ ಆರು ಮಂದಿ ಹದಿಹರೆಯದ ಹೆಣ್ಣು ಮಕ್ಕಳನ್ನು ತನ್ನ ಕೊಠಡಿಯೊಗಳಗೆ ಕರೆದು ಗುಂಡಿಕ್ಕಿ ಕೊಂದು ಹಾಕಿದ್ದಾನೆ. ಇದಾದ ನಂತರ ಆತನ ಪತ್ನಿ ಮುಶಾರತ್ ಪೊಲೀಸರಿಗೆ ದೂರು ನೀಡಿದ್ದಾಳೆ ಎಂದು ದಿ ಎಕ್ಸ್‌ಪ್ರೆಸ್ ಟ್ರೈಬ್ಯೂನ್ ಪತ್ರಿಕೆ ವರದಿ ಮಾಡಿದೆ.
ಪಂಜಾಬ್ ಪ್ರಾಂತ್ಯದ ನಿವಾಸಿ ಮುಬಾಶಿರ್‌ಗೆ ತನ್ನ ಇಬ್ಬರು ಪುತ್ರಿಯರು ಪಕ್ಕದ ಮನೆಯ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂಬಂಧ ಹೊಂದಿರುವ ವಿಷಯ ತನ್ನ ಮಗನಿಂದ ತಿಳಿಯಿತು. ಮರ್ಯಾದೆ ಇಲ್ಲದೇ ಬದುಕುತ್ತಿದ್ದವರವನ್ನು ನಿರ್ದಾಕ್ಷಿಣ್ಯವಾಗಿ ಕೊಂದು ಹಾಕಿದೆ ಎಂದು ಆತ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದಾನೆ.
ತನ್ನ ಪುತ್ರಿಯರಾದ ಸೀಮಾ (14) ಹಾಗೂ ರಜಿಯಾ (16) ಪಕ್ಕದ ಮನೆಯ ಕಾಲೇಜು ಹುಡುಗರೊಂದಿಗೆ ಸಂಬಂಧ ಹೊಂದಿದ್ದು, ಉಳಿದ ಸಹೋದರಿಯರು ಇದಕ್ಕಾಗಿ ಸಹಾಯ ಮಾಡುತ್ತಿದ್ದರು ಎಂದು ಮುಬಾಶಿರ್ ಆರೋಪಿಸಿದ್ದಾನೆ.
ಈ ಕುರಿತು ನಾನು ಮೊದಲೇ ಅವರಿಗೆ ಎಚ್ಚರಿಸಿದ್ದೆ, ಆದರೆ ಅವರು ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹಾಗಾಗಿ ಅವರಿಬ್ಬರೂ ಅಪರಾಧಿಗಳೇ ಆಗಿದ್ದಾರೆ ಎಂದು ಮುಬಾಶಿರ್ ಟಾಂಡಾಲಿಯಾನ್ವಾಲಾ ಪೊಲೀಸ್ ಇನ್ಸ್‌ಪೆಕ್ಟರ್ ಜಾವೇದ್ ಸಿಯಾಲ್ ಅವರಿಗೆ ತನಿಖೆ ವೇಳೆ ತಿಳಿಸಿದ್ದಾನೆ.
ಪೊಲೀಸ್ ಅಧಿಕಾರಿಗಳು ಮುಬಾಶಿರ್‌ನನ್ನು ವಶಕ್ಕೆ ತೆಗೆದುಕೊಂಡಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮುಬಾಶಿರ್‌ಗೆ ತನ್ನ ಕೃತ್ಯದ ಬಗ್ಗೆ ಪಶ್ಚಾತ್ತಪವಿಲ್ಲ. ಈ ಬಗ್ಗೆ ತನಗೆ ಹೆಮ್ಮೆ ಇದೆ ಎಂದು ಆತ ತಿಳಿಸಿದ್ದಾನೆ.