ಇಸ್ಲಾಮಾಬಾದ್, ಶುಕ್ರವಾರ, 19 ಆಗಸ್ಟ್ 2011( 17:29 IST )
ಭಾರತದಲ್ಲಿ ಅಣ್ಣಾ ಹಜಾರೆ ಅವರು ಭ್ರಷ್ಟಾಚಾರದ ವಿರುದ್ಧ ನಡೆಸುತ್ತಿರುವ ಆಂದೋಲನದ ಮಾದರಿಯಲ್ಲಿ ಪಾಕಿಸ್ತಾನದಲ್ಲೂ ಚಳುವಳಿ ನಡೆಯುವ ಕಾಲ ಬರಲಿದೆ ಎಂದು ಡಾನ್ ಪತ್ರಿಕೆ ತಿಳಿಸಿದೆ. ಭ್ರಷ್ಟಾಚಾರದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಸಾಮ್ಯತೆಯಿದೆ. ಪಾಕಿಸ್ತಾನಲ್ಲಿ ಭ್ರಷ್ಟಾಚಾರ ಮಿತಿಮೀರಿದೆ ಎಂದು ಸಾರ್ವಜನಿಕರಷ್ಟೇ ಅಲ್ಲ ಅಂತಾರಾಷ್ಟ್ರೀಯ ಕಾವಲು ಸಂಸ್ಥೆಗಳೂ ಸಹ ಇದನ್ನು ದೃಢಪಡಿಸಿವೆ ಎಂದು ಹೇಳಿದೆ.
ಭಷ್ಟ್ರಾಚಾರದಿಂದ ಮುಳುಗುತ್ತಿರುವ ಸಮಾಜವನ್ನು ರಕ್ಷಿಸಲು ಅಣ್ಣಾ ಹಜಾರೆ ರೀತಿಯ ಹೋರಾಟ ನಡೆಸುವ ಕಾಲ ಬರಬಹುದು ಎಂದು ಸಂಪಾದಕೀಯದಲ್ಲಿ ತಿಳಿಸಿದೆ.
ಭ್ರಷ್ಟಾಚಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ಬಗ್ಗೆ ಪ್ರಧಾನಿ ಮನಮೋಹನ ಸಿಂಗ್ ಅವರು ಅರಿಯಬೇಕು ಎಂದು ಪತ್ರಿಕೆ ಹೇಳಿದೆ.
ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ಅಣ್ಣಾ ಹಜಾರೆ ಅವರ ಬಗ್ಗೆ ಕೇಂದ್ರದ ಆರೋಪಕ್ಕೂ ಕೂಡ ಹೊಸ ತಿರುವು ನೀಡಿದೆ ಎಂದು ಪತ್ರಿಕೆ ತಿಳಿಸಿದೆ.
ಜಾಗತಿಕ ಮಟ್ಟದಲ್ಲೂ ಪ್ರಸಿದ್ದಿ ಪಡೆದ ಅಣ್ಣಾ ಹೋರಾಟ
ಸಮಾಜ ಸೇವಾ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಭ್ರಷ್ಟಾಚಾರದ ವಿರುದ್ಧ ನಡೆಸುತ್ತಿರುವ ಹೋರಾಟಕ್ಕೆ ಜಾಗತಿಕ ಮಟ್ಟದಲ್ಲೂ ಪ್ರಸಿದ್ಧಿ ಪಡೆದಿದ್ದು, ವಾಷಿಂಗ್ಟನ್ ಟೈಮ್ಸ್, ಹಾಗೂ ವಾಲ್ ಸ್ಟ್ರೀಟ್ ಜರ್ನಲ್ ಮೊದಲಾದ ವಿದೇಶಗಳ ಪ್ರಮುಖ ಪತ್ರಿಕೆಗಳು ಸಹ ಅಣ್ಣಾ ನಿರಶನದ ಸುದ್ದಿಗಳನ್ನು ಆದ್ಯತೆಯ ಮೇರೆಗೆ ಪ್ರಕಟಿಸಿವೆ.
ದಿ ಟೆಲಿಗ್ರಾಫ್ ಭಾರತದಲ್ಲಿ ಆರ್ಥಿಕತೆ ಉತ್ತುಂಗ ಸ್ಥಿತಿಯಲ್ಲಿದೆ ಆದರೆ ಅಣ್ಣಾ ಹಜಾರೆ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ರಾಜಕೀಯ ಮತ್ತು ಭ್ರಷ್ಟಾಚಾರ ವಿರುದ್ಧ ಜನಸಾಮಾನ್ಯರ ಆಕ್ರೋಶಕ್ಕೆ ಕಿಚ್ಚು ಹಚ್ಚಿದೆ.
ವಾಷಿಂಗ್ಟನ್ ಟೈಮ್ಸ್ ಸ್ವಾತಂತ್ರ್ಯ ಹೋರಾಟಗಾರ ಹಾಗೂ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ಹಾಕಿಕೊಟ್ಟ ಅಹಿಂಸಾತ್ಮಕ ಮಾರ್ಗದಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿರುವ 73 ವರ್ಷದ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಭ್ರಷ್ಟಾಚಾರ ವಿರೋಧಿ ಆಂದೋಲನದ ರೋಲ್ ಮಾಡೆಲ್ ಆಗಿ ಹೊರಹೊಮ್ಮಿದ್ದಾರೆ.
ಬಿಬಿಸಿ ಅಣ್ಣಾ ಹಜಾರೆ ಅವರಿಗೆ ನಿರಂತರವಾಗಿ ಹರಿದು ಬರುತ್ತಿರುವ ಜನ ಬೆಂಬಲವು ಪ್ರಧಾನಿ ಮನಮೋಹನ ಸಿಂಗ್ ಅವರ ಆಡಳಿತಕ್ಕೆ ಆತಂಕ ಮೂಡಿಸಿದೆ.
ವಾಲ್ ಸ್ಟ್ರೀಟ್ ಜರ್ನಲ್ ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ಅವರು ನಡೆಸುತ್ತಿರುವ ಹೋರಾಟವು ಅಧಿಕಾರಿಗಳನ್ನು ಅಧೀರರನ್ನಾಗಿಸಿದೆ ಇದು ಎಲ್ಲಿಗೆ ತಲುಪುತ್ತದೆ ಎಂಬುವುದನ್ನು ಯಾರೊಬ್ಬರೂ ಹೇಳಲು ಸಾಧ್ಯವಿಲ್ಲ.
ದಿ ಗಾರ್ಡಿಯನ್ ದೇಶದಲ್ಲಿ ಮಿತಿ ಮೀರಿರುವ ಭ್ರಷ್ಟಾಚಾರದ ಪಿಡುಗಿನ ವಿರುದ್ಧ ಅಣ್ಣಾ ನಡೆಸುತ್ತಿರುವ ಹೋರಾಟ ಪ್ರಬಲ ಚಳವಳಿಯಾಗಿ ಹೊರಹೊಮ್ಮಿದ್ದು, ಉಭಯ ರೀತಿಯಲ್ಲಿಯೂ ಮಟ್ಟಹಾಕಲು ವಿಫಲವಾಗಿರುವ ಭ್ರಷ್ಟಾಚಾರವನ್ನು ಮಟ್ಟಹಾಕುವಲ್ಲಿ ಅಣ್ಣಾ ಹೋರಾಟ ಮತ್ತಷ್ಟು ಸ್ಫೂರ್ತಿ ತಂದಿದೆ.