ಲಿಬಿಯಾ ಅಧ್ಯಕ್ಷ ಮಅಮ್ಮರ್ ಗಡಾಫಿ ತಾನು ಶರಣಾಗುವುದಿಲ್ಲ ಎಂದು ಹೇಳಿದ್ದು, ರಾಜಧಾನಿ ಟ್ರಿಪೋಲಿ ಉಳಿಸಿಕೊಳ್ಳಲು ಹೋರಾಟ ನಡೆಸುವಂತೆ ಸೇನಾಪಡೆಗೆ ಕರೆ ನೀಡಿದ್ದಾರೆ. ಲಿಬಿಯಾವನ್ನು ಅತಿಕ್ರಮಿಸಲು ನಾವು ಬಿಡುವುದಿಲ್ಲ, ನಾನು ನಿಮ್ಮೊಂದಿಗಿದ್ದೇನೆ ಹೋರಾಟ ನಡೆಸಿ ಎಂದು ಅವರು ರಕ್ಷಣಾ ಪಡೆಗಳಿಗೆ ಸಂದೇಶ ನೀಡಿರುವ ಹೊಸ ಧ್ವನಿ ಸಂದೇಶ ಟಿವಿ ಚಾನಲ್‌ನಲ್ಲಿ ಪ್ರಸಾರವಾಗಿದೆ.
ನಾವು ಶರಣಾಗುವುದಿಲ್ಲ, ದೇವರ ದಯೆಯಿಂದ ನಾವು ಜಯಗಳಿಸುತ್ತೇವೆ. ನಾವು ಬಂಡುಕೋರ ಪಡೆಗಳ ಈ ಸೋಗಲಾಡಿತನಕ್ಕೆ ಅಂತ್ಯಹಾಡುತ್ತೇವೆ ಎಂದು ಹೇಳಿದ್ದಾರೆ.
ಬಂಡುಕೋರ ಪಡೆಗಳನ್ನು ಇಲಿ ಮತ್ತು ಹೆಗ್ಗಣಗಳಿಗೆ ಹೋಲಿಸಿರುವ ಗಡಾಫಿ, ಬಂಡುಕೋರರ ವಶದಲ್ಲಿರುವ ಪ್ರದೇಶಗಳನ್ನು ವಶಪಡಿಸಿಕೊಳ್ಳುವಂತೆ ಸರಕಾರಿ ಟಿವಿ ಚಾನಲ್‌ಗೆ ಧ್ವನಿ ಸಂದೇಶ ರವಾನಿಸಿದ್ದಾರೆ.
ಟ್ರಿಪೋಲಿ:ಗಡಾಫಿ ವಿರುದ್ಧ ಬಿರುಸುಗೊಂಡ ಬಂಡುಕೋರರ ಸಮರ ಟ್ರಿಪೋಲಿ: ಲಿಬಿಯಾ ಅಧ್ಯಕ್ಷ ಮಅಮ್ಮರ್ ಗಡಾಫಿಯ ವಿರುದ್ಧ ಹೋರಾಡುತ್ತಿರುವ ಬಂಡುಕೋರ ಪಡೆಗಳು ಲಿಬಿಯಾ ರಾಜಧಾನಿ ಟ್ರಿಪೋಲಿ ನಗರದ ಬಹುತೇಕ ಭಾಗವನ್ನು ವಶಪಡಿಸಿಕೊಂಡಿದ್ದು, ಗಡಾಫಿ ಮನೆಯ ಸಮೀಪ ಸರಕಾರಿ ಪಡೆಗಳು ಹಾಗೂ ಬಂಡುಕೋರರ ನಡುವೆ ಭೀಕರ ಯುದ್ಧ ನಡೆಯುತ್ತಿದೆ.
ಭಾನುವಾರ ರಾತ್ರಿಯಿಡೀ ಟ್ರಿಪೋಲಿ ನಗರದ ಹೃದಯಭಾಗದಲ್ಲಿರುವ ಗ್ರೀನ್ ಸ್ಕ್ವೇರ್‌ನಲ್ಲಿ ಜಮಾಯಿಸಿದ್ದ ಸಾವಿರಾರು ಜನರು ಹರ್ಷೋದ್ಘಾರ ಮಾಡಿದರು. ಈ ಹಿಂದೆ ಈ ವೃತ್ತದಲ್ಲಿ ಗಡಾಫಿ ಪರ ಪ್ರದರ್ಶನ ನಡೆಯುತ್ತಿತ್ತು.
ದೇಶದ ದಕ್ಷಿಣ ಮತ್ತು ಪಶ್ಚಿಮ ಭಾಗದಲ್ಲಿ ಬಂಡುಕೋರ ಪಡೆಗಳಿಗೆ ಸ್ವಲ್ಪ ಮಟ್ಟಿನ ಪ್ರತಿರೋಧ ಎದುರಾಗಿದೆ.
ಟ್ರಿಪೋಲಿ ನಗರದ ಶೇ. 15ರಿಂದ 20 ಭಾಗವು ಇನ್ನೂ ಗಡಾಫಿ ಪಡೆಯ ವಶದಲ್ಲಿದೆ ಎಂದು ಬಂಡುಕೋರ ಪಡೆಯ ವಕ್ತಾರ ತಿಳಿಸಿದ್ದಾರೆ.
ತಾವು ಗಡಾಫಿ ಅವರ ಪುತ್ರ ಸೈಫ್ ಅಲ್ ಇಸ್ಲಾಂ ಅವರನ್ನು ಬಂಧಿಸಿರುವುದಾಗಿ ತಿಳಿಸಿರುವ ಬಂಡುಕೋರರು ಆತ ಈಗ ಎಲ್ಲಿದ್ದಾನೆ ಎಂಬುದನ್ನು ಬಹಿರಂಗಪಡಿಸಿಲ್ಲ.
ಬಂಡುಕೋರರು ಲಬಿಯಾ ರಾಜಧಾನಿ ಟ್ರಿಪೋಲಿಯನ್ನು ವಶಪಡಿಸಿಕೊಂಡಿರುವುದನ್ನು ಸ್ವಾಗತಿಸಿರುವ ಪಾಶ್ಚಿಮಾತ್ಯ ರಾಷ್ಟ್ರಗಳ ಮುಖಂಡರು ಅಧಿಕಾರ ತ್ಯಜಿಸುವಂತೆ ಒತ್ತಾಯಿಸಿದ್ದಾರೆ.
ಗ್ರೀನ್ ಸ್ಕ್ವೇರ್‌ಗೆ ಮೂಲ ಹೆಸರಾದ ಮಾರ್ಟೀಯರ್ಸ್ ಸ್ಕ್ವೇರ್ (ಹುತಾತ್ಮ ವೃತ್ತ) ಎಂದು ಮರು ನಾಮಕರಣ ಮಾಡಲಾಗಿದ್ದು, ಬಂಡುಕೋರ ಪಡೆಯ ಬೆಂಬಲಿಗರು ಲಿಬಿಯಾ ಸರಕಾರದ ಹಸಿರು ಧ್ವಜವನ್ನು ಹರಿದುಹಾಕಿದ್ದಲ್ಲದೇ ಗಡಾಫಿಯ ಭಾವಚಿತ್ರವನ್ನು ಕಾಲಿನಿಂದ ತುಳಿದಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಗಡಾಫಿ ಆಡಳಿತ ಅಂತಿಮ ಹಂತಕ್ಕೆ ತಲುಪಿದ್ದು, ಟ್ರಿಪೋಲಿ ನಿರಂಕುಶ ಆಡಳಿತದಿಂದ ಮುಕ್ತವಾಗಿದೆ ಎಂದು ತಿಳಿಸಿದ್ದಾರೆ.
ಗಡಾಫಿಯ ಅಂತ್ಯ ಸನಿಹವಾಗುತ್ತಿದೆ ಎಂದು ಇಂಗ್ಲೆಂಡ್ ಪ್ರಧಾನಿ ಡೇವಿಡ್ ಕ್ಯಾಮರೂನ್ ತಿಳಿಸಿದ್ದಾರೆ.
ಈ ಮೊದಲು ಲಿಬಿಯಾ ದೇಶದ ಜನರ ಮೇಲೆ ಹಿಂಸಾಚಾರ ನಡೆಸಿದ್ದ ಗಡಾಫಿ ಈಗ ತಮ್ಮ ದೇಶದ ಜನರಿಂದ ತೊಂದರೆ ಅನುಭವಿಸುವ ಮೊದಲೇ ಅಧಿಕಾರ ತ್ಯಜಿಸಬೇಕು ಎಂದು ಹೇಳಿದ್ದಾರೆ.
ನಾಗರಿಕರ ಮೇಲೆ ಅಮಾನವೀಯವಾಗಿ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಲಿಬಿಯಾ ಅಧ್ಯಕ್ಷ ಗಡಾಫಿ, ಆತನ ಪುತ್ರ ಸೈಫ್ ಅಲ್ ಇಸ್ಲಾಂ ಹಾಗೂ ಗುಪ್ತಚರ ಸಂಸ್ಥೆಯ ಮುಖ್ಯಸ್ಥ ಅಬ್ದುಲ್ಲಾ ಅಲ್ ಸನುಸಿ ಅವರ ಬಂಧನಕ್ಕೆ ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯ ವಾರೆಂಟ್ ಜಾರಿಗೊಳಿಸಿದೆ.