ಲಿಬಿಯಾ ಮುಖಂಡ ಮುಅಮ್ಮರ್ ಗಡಾಫಿ ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಕಾಂಡೊಲಿಸಾ ರೈಸ್ ಅವರನ್ನು ಬಹಳ ಇಷ್ಟಪಡುತ್ತಿದ್ದರು ಎಂಬ ಅಂಶ ಮಾಧ್ಯಮ ವರದಿಯಿಂದ ಬಹಿರಂಗವಾಗಿದೆ. ಆಫ್ರಿಕಾ ಮೂಲದ ಕಪ್ಪು ಮಹಿಳೆ ರೈಸ್ ಅವರನ್ನು ಗಡಾಫಿ ಇಷ್ಡಪಡುತ್ತಿರುವುದಕ್ಕೆ ಈ ಆಲ್ಬಂ ಸಾಕ್ಷಿಯಾಗಿದೆ.
ಟ್ರಿಪೋಲಿಯಲ್ಲಿರುವ ಗಡಾಫಿ ನಿವಾಸವನ್ನು ವಶಪಡಿಸಿಕೊಂಡಿರುವ ಬಂಡುಕೋರ ಪಡೆಗಳಿಗೆ ರೈಸ್ ಅವರ ಭಾವಚಿತ್ರಗಳಿದ್ದ ಆಲ್ಬಂ ದೊರೆತಿದೆ ಎಂದು ಸ್ಕೈನ್ಯೂಸ್ ವರದಿ ಮಾಡಿದೆ.
2007ರಲ್ಲಿ ಅಲ್ ಜಜೀರಾ ಟೀವಿ ನಡೆಸಿದ್ದ ಸಂದರ್ಶನದಲ್ಲಿ ರೈಸ್ ಅವರನ್ನು ತುಂಬಾ ಇಷ್ಟಪಡುತ್ತಿರುವುದಾಗಿ ಗಡಾಫಿ ಬಹಿರಂಗವಾಗಿ ಹೇಳಿದ್ದರು.
ಕಪ್ಪು ಮಹಿಳೆಯಾಗಿರುವ ಆಕೆ ಅರಬ್ ಮುಖಂಡರಿಗೆ ಆದೇಶ ನೀಡುತ್ತಿರುವುದನ್ನು ಕಂಡಾಗ ನನಗೆ ತುಂಬಾ ಹೆಮ್ಮೆಯಾಗುತ್ತಿದೆ ಎಂದು ಗಡಾಫಿ ಅವರ ಹೇಳಿಕೆಯನ್ನು ಉಲ್ಲೇಖಿಸಿ ಟಿವಿ ಚಾನಲ್ ವರದಿ ಮಾಡಿದೆ.
ಅಮೆರಿಕ ವಿದೇಶಾಂಗ ಸಚಿವೆಯಾಗಿದ್ದ ಕಾಂಡೊಲೀಸಾ ರೈಸ್ 2008ರಲ್ಲಿ ಲಿಬಿಯಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗಡಾಫಿ ಅವರನ್ನು ಭೇಟಿಯಾಗಿದ್ದರು. ಲಿಬಿಯಾ-ಅಮೆರಿಕ ನಡುವೆ ಬಾಂಧವ್ಯ ವೃದ್ಧಿಸುವ ನಿಟ್ಟಿನಲ್ಲಿ ರೈಸ್ ಭೇಟಿ ನೀಡಿದ್ದರು.
ಗಡಾಫಿ ಅವರ ನಿವಾಸಕ್ಕೂ ಭೇಟಿ ನೀಡಿದ್ದ ಕಾಂಡೊಲಿಸಾ ರೈಸ್ ಪವಿತ್ರ ರಂಜಾನ್ ಮಾಸದಲ್ಲಿ ಸಾಂಪ್ರದಾಯಿಕ ಆಹಾರವನ್ನೂ ಸೇವಿಸಿದ್ದರು. ಈ ಸಂದರ್ಭದಲ್ಲಿ ಗಡಾಫಿ ರೈಸ್ಗೆ ವಜ್ರದ ಉಂಗುರ ಹಾಗೂ ಲಾಕೆಟ್ ಸೇರಿದಂತೆ ಬೆಲೆಬಾಳುವ ಉಡುಗೊರೆಗಳನ್ನು ನೀಡಿದ್ದರು. ಗಡಾಫಿ ಅವರು ರೈಸ್ರನ್ನು ಹೆಚ್ಚು ಇಷ್ಟಪಡುತ್ತಿದ್ದುದೇ ಇದಕ್ಕೆ ಕಾರಣ ಎಂದು ಸ್ಕೈ ನ್ಯೂಸ್ ವರದಿ ಮಾಡಿದೆ.
ಪ್ರಸ್ತುತ ಸ್ಯಾನ್ಫೋರ್ಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿರುವ ಕಾಂಡೊಲಿಸಾ ರೈಸ್ ಈ ಕುರಿತು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿಲ್ಲ.