ಲಿಬಿಯಾ ಅಧ್ಯಕ್ಷ ಮುಅಮ್ಮರ್ ಗಡಾಫಿ ಹಾಗೂ ಆತನ ಪುತ್ರರು ಆರು ವಾಹನಗಳಲ್ಲಿ ಲಿಬಿಯಾ - ಅಲ್ಜೀರಿಯಾ ಗಡಿ ದಾಟಿ ಪರಾರಿಯಾಗಿದ್ದಾರೆ ಎಂದು ಈಜಿಪ್ಟ್‌ನ ಸರಕಾರಿ ಮಾಧ್ಯಮ ಸಂಸ್ಥೆ ಮೆನಾ ಶನಿವಾರ ವರದಿ ಮಾಡಿದೆ.
ಮರ್ಸಿಡೀಸ್ ಬುಲೆಟ್ ಪ್ರೂಫ್ ಕಾರುಗಳಲ್ಲಿ ಗಡಾಫಿ ಅಲ್ಜೀರಿಯಾಕ್ಕೆ ತೆರಳುವ ಸಂದರ್ಭದಲ್ಲಿ ಬಂಡುಕೋರ ಪಡೆಗಳಿಂದ ಪ್ರತಿರೋಧ ವ್ಯಕ್ತವಾಗಲಿಲ್ಲ ಎನ್ನಲಾಗಿದೆ.
ಗಡಾಫಿಯೊಂದಿಗೆ ಲಿಬಿಯಾದ ಪ್ರಮುಖ ಅಧಿಕಾರಿಗಳೂ ಪರಾರಿಯಾಗಿದ್ದಾರೆ ಎಂದು ಬಂಡುಕೋರ ಪಡೆಯ ಮೂಲಗಳು ಹೇಳಿವೆ.
ಲಿಬಿಯಾ ಜನತೆಯನ್ನು ರಕ್ಷಿಸುವ ನಿಟ್ಟಿನಲ್ಲಿ ವಿಶ್ವ ಸಂಸ್ಥೆಯಲ್ಲಿ ಕೈಗೊಂಡ ನಿರ್ಣಯದಂತೆ ಕಳೆದ ಮಾರ್ಚ್‌ನಲ್ಲಿ ಅಂತಾರಾಷ್ಟ್ರೀಯ ಪಡೆಗಳು ಸೇನಾ ಕಾರ್ಯಾಚರಣೆ ಆರಂಭಿಸುವ ಮೂಲಕ ಗಡಾಫಿಯ 42 ವರ್ಷಗಳ ಅಧಿಕಾರಕ್ಕೆ ಅಂತ್ಯ ಹಾಡಲು ಯತ್ನಿಸಿದ್ದವು. ಗಡಾಫಿ ವಿರುದ್ಧ ಹೋರಾಡುತ್ತಿರುವ ಬಂಡುಕೋರ ಪಡೆಗಳು ರಾಜಧಾನಿ ಟ್ರಿಪೋಲಿ ಸೇರಿದಂತೆ ದೇಶದ ಬಹುತೇಕ ಭಾಗಗಳನ್ನು ವಶಪಡಿಸಿಕೊಂಡಿವೆ.