ಲಿಬಿಯಾದ ರಾಜಧಾನಿ ಟ್ರಿಪೋಲಿ ಮುಅಮ್ಮರ್ ಗಡಾಫಿ ಪಡೆಗಳಿಂದ ಮುಕ್ತವಾಗಿದೆ ಎಂದು ಬಂಡುಕೋರ ಪಡೆಯ ಫೀಲ್ಡ್ ಕಮಾಂಡರ್ ತಿಳಿಸಿದ್ದಾರೆ. ಶುಕ್ರವಾರ ರಾತ್ರಿಯಿಡೀ ನಡೆದ ಕಾಳಗದಲ್ಲಿ ಟ್ರಿಪೋಲಿಯಲ್ಲಿದ್ದ ಗಡಾಫಿ ಸೇನೆಯನ್ನು ಹೊಡೆದೋಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಖ್ವಾಶರ್ ಬಿನ್ ಘಾಶಿರ್‌ನ ನಿವಾಸಿಗಳು ವಿಮಾನ ನಿರೋಧಕ ಬಂದೂಕುಗಳಿಂದ ಗುಂಡು ಹಾರಿಸುವ ಮೂಲಕ ವಿಜಯೋತ್ಸವ ಆಚರಿಸಿದರು. ಈ ಸಂದರ್ಭದಲ್ಲಿ ಗಡಾಫಿ ಭಾವಚಿತ್ರವನ್ನು ಕಾಲಿನಿಂದ ತುಳಿದರು.
ರಾಜಧಾನಿ ಟ್ರಿಪೋಲಿಯಿಂದ 20 ಕಿಲೋ ಮೀಟರ್ ದೂರ ಇರುವ ಗ್ರಾಮೀಣ ಪ್ರದೇಶದಲ್ಲಿ ಜನರು ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಟ್ರಿಪೋಲಿಯ ಜನರೂ ವಿಜಯೋತ್ಸವ ಆಚರಿಸುತ್ತಿದ್ದು, ರಾಜಧಾನಿ ಈಗ ಸಂಪೂರ್ಣವಾಗಿ ಬಂಡುಕೋರರ ಹಿಡಿತದಲ್ಲಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಂಡುಕೋರ ಪಡೆಯ ಫೀಲ್ಡ್ ಕಮಾಂಡರ್ ಒಮರ್ ಅಲ್ ಘುಜಾಯಲ್, ನಾವು ಗಡಾಫಿ ಸೈನಿಕರನ್ನು ಟ್ರಿಪೋಲಿಯಿಂದ ಹೊರಗೆ ಓಡಿಸಿದ್ದೇವೆ ಎಂದು ತಿಳಿಸಿದ್ದಾರೆ.