ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನ್ಯೂಯಾರ್ಕ್: ತಲೆಗೆ ಪೇಟ, ಗಡ್ಡ ಬಿಡಲು ಸಿಖ್ ಸಮುದಾಯಕ್ಕೆ ಅಸ್ತು (New York law | Ensure freedom | Sikhs employees | International News in Kannada)
ನ್ಯೂಯಾರ್ಕ್: ತಲೆಗೆ ಪೇಟ, ಗಡ್ಡ ಬಿಡಲು ಸಿಖ್ ಸಮುದಾಯಕ್ಕೆ ಅಸ್ತು
ನ್ಯೂಯಾರ್ಕ್, ಗುರುವಾರ, 1 ಸೆಪ್ಟೆಂಬರ್ 2011( 09:57 IST )
ಅಮೆರಿಕದ ಪೊಲೀಸ್ ಇಲಾಖೆ ಹಾಗೂ ಸಾರಿಗೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಖ್ ಸಮುದಾಯದವರು ತಲೆಗೆ ಪೇಟ ಸುತ್ತಲು ಹಾಗೂ ಗಡ್ಡ ಬಿಡಲು ಅನುಮತಿ ನೀಡುವ ಕಾಯಿದೆಯೊಂದಕ್ಕೆ ನ್ಯೂಯಾರ್ಕ್ ಮೇಯರ್ ಮೈಕೆಲ್ ಬ್ಲೂಮ್ ಬಗ್ ಬುಧವಾರ ಸಹಿ ಹಾಕಿದ್ದಾರೆ. ಇದರಿಂದಾಗಿ ಸಿಖ್ ಸಮುದಾಯದವರು ತಾವು ಕಾರ್ಯನಿರ್ವಹಿಸುವ ಸ್ಥಳದಲ್ಲಿ ತಮ್ಮ ಧಾರ್ಮಿಕ ಸ್ವಾತಂತ್ರ್ಯಕ್ಕೆ ಚ್ಯುತಿ ಬರುವುದಿಲ್ಲ.
ಕಾರ್ಯನಿರ್ವಹಿಸುವ ಸ್ಥಳದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಕಾಯಿದೆಯನ್ನು ಸಿಖ್ ಸಮುದಾಯದ ಸಹಭಾಗಿತ್ವದ ಸಹಯೋಗದಲ್ಲಿ ಜಾರಿಗೊಳಿಸಲಾಗಿದ್ದು, ಇದನ್ನು ಕ್ವೀನ್ಸ್ ಡೆಮಾಕ್ರೆಟ್ ಕೌನ್ಸಿಲ್ ಸದಸ್ಯ ಮಾರ್ಕ್ ವಿಪ್ರಿನ್ ಪ್ರಾಯೋಜಿಸಿದ್ದರು.
ಈ ಕಾನೂನಿಗೆ ಸಹಿ ಮಾಡಿದ ನಂತರ ಮಾತನಾಡಿದ ಬ್ಲೂಮ್ ಬರ್ಗ್ ಉದ್ಯೋಗದಾತರು ಉದ್ಯೋಗಿಗಳ ಧಾರ್ಮಿಕ ಸ್ವಾತಂತ್ರ್ಯವನ್ನು ಗೌರವಿಸಬೇಕು ಇಲ್ಲದಿದ್ದರೆ ಕಾನೂನು ಉಲ್ಲಂಘನೆ ಮಾಡಿದ್ದಕ್ಕಾಗಿ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಈ ಕಾನೂನಿನಿಂದಾಗಿ ಅಮೆರಿಕದಲ್ಲಿರುವ ಅನ್ಯ ಧರ್ಮೀಯರಿಗೆ ಧಾರ್ಮಿಕ ಸ್ವಾತಂತ್ರ್ಯನೀಡುವ ಕಾಯಿದೆ ಜಾರಿಗೆ ಬಂದಿದ್ದು,ಅಮೆರಿಕದ ಎಲ್ಲ ಪ್ರಜೆಗಳೂ ಸಂವಿಧಾನ ನೀಡಿರುವ ಸ್ವಾತಂತ್ರ್ಯವನ್ನು ಪಾಲಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಧಾರ್ಮಿಕ ಅಲ್ಪ ಸಂಖ್ಯಾತರಾದ ಸಿಖ್ ಮತ್ತು ಮುಸ್ಲಿಂ ಸಮುದಾಯದವರಿಗೆ ಉದ್ಯೋಗದಾತರು ನೀಡುತ್ತಿದ್ದ ಕಿರುಕುಳದಿಂದ ಪಾರಾಗಲು ಈ ಕಾಯಿದೆ ಸಹಕಾರಿಯಾಗಿದೆ ಎಂದು ಸಿಖ್ ಸಹಭಾಗಿತ್ವದ ಕಾರ್ಯಕ್ರಮದ ನಿರ್ದೇಶಕ ಹಾಗೂ ಸಹ ಸಂಸ್ಥಾಪಕ ಅಮರ್‌ದೀಪ್ ಸಿಂಗ್ ಹೇಳಿದ್ದಾರೆ.
ಸಿಖ್ ಮೊದಲಾದ ಧಾರ್ಮಿಕ ಅಲ್ಪ ಸಂಖ್ಯಾತರನ್ನು ಅನ್ಯಾಯವಾಗಿ ಕೆಲಸದಿಂದ ತೆಗೆದು ಹಾಕುವುದನ್ನು ತಡೆಗಟ್ಟಲು ಈ ಕಾಯಿದೆ ಸಹಕಾರಿಯಾಗಿದೆ ಎಂದು ಅಮರ್‌ದೀಪ್ ಸಿಂಗ್ ತಿಳಿಸಿದ್ದಾರೆ. ನ್ಯೂಯಾರ್ಕ್ ಪೊಲೀಸ್ ಇಲಾಖೆ (ಎನ್‌ವೈಪಿಡಿ)ಯಲ್ಲಿ ಈ ಮೊದಲು ಕಾರ್ಯನಿರ್ವಹಿಸುತ್ತಿದ್ದ ಸಿಖ್ ಧರ್ಮೀಯರಿಗೆ ಪೇಟ ಧರಿಸಲು ಅವಕಾಶವಿರಲಿಲ್ಲ.
ಮಹಾನಗರ ಸಾರಿಗೆ ಸಂಸ್ಥೆ (ಎಂಟಿಸಿ)ಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಖ್ ಮೊದಲಾದ ಧಾರ್ಮಿಕ ಅಲ್ಪ ಸಂಖ್ಯಾತರಿಗೆ ಎಂಟಿಎ ಲೋಗೋವನ್ನು ಕಡ್ಡಾಯವಾಗಿ ಬಳಸಬೇಕು ಎಂದು ಒತ್ತಡ ಹೇರಲಾಗುತ್ತಿತ್ತು ಅಲ್ಲದೇ ಪೆಂಟಾಗನ್ ಮೇಲೆ ನಡೆದ 9/11ರ ದಾಳಿಯ ನಂತರ ಎಂಟಿಎ ಇದನ್ನು ಕಡ್ಡಾಯಗೊಳಿಸಿತ್ತು ಎಂದು ತಿಳಿಸಿದ್ದಾರೆ.
ಧಾರ್ಮಿಕ ಅಲ್ಪ ಸಂಖ್ಯಾತರನ್ನು ಗೌರವಿಸುವ ಈ ಕಾನೂನಿನಿಂದಾಗಿ ಎನ್‌ವೈಪಿಡಿ ಅಷ್ಟೇ ಅಲ್ಲ ಇತರೆ ಸರಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲೂ ಧಾರ್ಮಿಕ ಅಲ್ಪ ಸಂಖ್ಯಾತರ ಭಾವನೆಗಳನ್ನು ಗೌರವಿಸುವುದು ಕಡ್ಡಾಯವಾಗಿದೆ ಎಂದು ತಿಳಿಸಿದ್ದಾರೆ.