ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಆಹಾರ ಕೊಡಬೇಕಿದ್ರೆ ಲೈಂಗಿಕ ತೃಷೆ ತೀರಿಸ್ಬೇಕು:ವಿಕಿಲೀಕ್ಸ್ ಸ್ಫೋಟ (UN Peacekeepers | Food For Sex | Ivory Coast | WikiLeaks | Kannada International News | Latest International News)
ಆಹಾರ ಕೊಡಬೇಕಿದ್ರೆ ಲೈಂಗಿಕ ತೃಷೆ ತೀರಿಸ್ಬೇಕು:ವಿಕಿಲೀಕ್ಸ್ ಸ್ಫೋಟ
ಅಬಿಡ್ಜೆನ್ (ಐವರಿ ಕೋಸ್ಟ್), ಭಾನುವಾರ, 4 ಸೆಪ್ಟೆಂಬರ್ 2011( 10:01 IST )
ವಿಶ್ವ ಸಂಸ್ಥೆಯು ಐವರಿ ಕೋಸ್ಟ್‌ನಲ್ಲಿರುವ ಬಡ ಜನರಿಗೆ ವಿತರಿಸಲು 1.1ಕೋಟಿ ಟನ್ ಆಹಾರಧಾನ್ಯವನ್ನು ಸರಬರಾಜು ಮಾಡಿದ್ದರೂ ಶಾಂತಿ ಪಾಲನಾ ಪಡೆ ಅಪ್ರಾಪ್ತ ಬಾಲಕಿಯರನ್ನು ಲೈಂಗಿಕ ತೃಷೆಗೆ ಬಳಸಿಕೊಂಡ ನಂತರವಷ್ಟೇ ಆಹಾರ ನೀಡುತ್ತಿದೆ ಎಂಬ ಆಘಾತಕಾರಿ ಸಂಗತಿಯನ್ನು ವಿಕಿಲೀಕ್ಸ್ ಬಯಲು ಮಾಡಿದೆ.
ಕಳೆದ 10 ವರ್ಷಗಳಿಂದಲೂ ಸಂಘರ್ಷ ನಡೆಯುತ್ತಿರುವ ಟೌಲ್ ಪ್ಲಿಯು ನಗರದಲ್ಲಿರುವ ಶಾಂತಿ ಪಾಲನಾ ಪಡೆಯ ಯೋಧರು ದುರ್ವರ್ತನೆ ನಡೆಸುತ್ತಿದ್ದಾರೆ ಎಂದು ವಿಕಿಲೀಕ್ಸ್ ಕೇಬಲ್ 2010ರಲ್ಲಿ ಸುದ್ದಿ ಪ್ರಕಟಿಸಿತ್ತು.
ಟೌಲ್ ಪ್ಲಿಯು ಪಟ್ಟಣದಲ್ಲಿ 10 ಬಾಲಕಿಯರ ಪೈಕಿ ಕನಿಷ್ಠ 8 ಮಂದಿ ಅಪ್ರಾಪ್ತರಾಗಿದ್ದು, ಇವರೆಲ್ಲರನ್ನೂ ಯೋಧರು ನಿರಂತರವಾಗಿ ಲೈಂಗಿಕ ತೃಷೆಗಾಗಿ ಬಳಸಿಕೊಂಡಿದ್ದರು ಎಂದು ಇಂಗ್ಲೆಂಡ್‌ನ ಮಕ್ಕಳ ರಕ್ಷಣಾ ಸಂಸ್ಥೆಯೊಂದು ತಿಳಿಸಿದ್ದಾಗಿ ವಿಕಿಲೀಕ್ಸ್ ವರದಿ ಮಾಡಿದೆ.
ಆಹಾರ ಇಲ್ಲವೇ ವಸತಿಗಾಗಿ ನಾವು ನಿರಂತರವಾಗಿ ಯೋಧರಿಗೆ ಲೈಂಗಿಕ ಸುಖ ನೀಡಿದ್ದೆವು ಎಂದು 10ರಲ್ಲಿ 8ಮಂದಿ ಬಾಲಕಿಯರು ತಿಳಿಸಿದ್ದಾರೆ ಎಂದು ರಾಜತಾಂತ್ರಿಕರಿಗೆ ರಕ್ಷಣಾ ತಂಡದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ವಿಶ್ವ ಸಂಸ್ಥೆಯ ವಕ್ತಾರ ಮೈಕೇಲ್ ಬೊನ್ನಾರ್ಡೆಯಾಕ್ಸ್, ಲೈಂಗಿಕ ಹಗರಣದ ಕುರಿತು ಒಂದು ವರ್ಷ ತನಿಖೆ ನಡೆಸಿದ ನಂತರ ಶಾಂತಿಪಾಲನಾಪಡೆಯ 16 ಮಂದಿ ಯೋಧರನ್ನು ವಾಪಸ್ ಕರೆಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಅಪ್ರಾಪ್ತ ಬಾಲಕಿಯರ ಮೇಲೆ ನಡೆಯುತ್ತಿರುವ ಲೈಂಗಿಕ ಶೋಷಣೆಯನ್ನು ತಡೆಗಟ್ಟುವಲ್ಲಿ ಸೇನಾಧಿಕಾರಿಗಳು ವಿಫಲರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ವಿಶ್ವ ಸಂಸ್ಥೆಯ ಶಾಂತಿಪಾಲನಾ ಪಡೆಯ ಯೋಧರು ಕಾಂಗೋ, ಕಾಂಬೋಡಿಯಾ, ಹೈಟಿ ಹಾಗೂ ಐವರಿ ಕೋಸ್ಟ್‌ನಲ್ಲಿ ಲೈಂಗಿಕ ದುರ್ವರ್ತನೆ ನಡೆಸಿದ್ದ ಬಗ್ಗೆ ಆಪಾದನೆಗಳಿದ್ದವು.
ಶಾಂತಿಪಾಲನಾ ಪಡೆಯ ಯೋಧರೊಂದಿಗೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗುವಂತೆ ಬಾಲಕಿಯರ ಪೋಷಕರೇ ಸಹಕರಿಸುತ್ತಿದ್ದರು. ಕಿತ್ತು ತಿನ್ನುವ ಬಡತನವೇ ಇದಕ್ಕೆ ಪ್ರಮುಖ ಕಾರಣ ಎಂದು ವಿಕಿಲೀಕ್ಸ್ ಬಹಿರಂಗಪಡಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಮೈಕೇಲ್ ಬೊನ್ನಾರ್ಡೆಯಾಕ್ಸ್, 2007ರಿಂದಲೂ ಐವರಿ ಕೋಸ್ಟ್‌ನಲ್ಲಿರುವ ಶಾಂತಿಪಾಲನಾ ಪಡೆಯ ಯೋಧರ ವಿರುದ್ಧ ಲೈಂಗಿಕ ದುರ್ವರ್ತನೆಯ 42 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 16 ಪ್ರಕರಣಗಳು ಅಪ್ರಾಪ್ತರಿಗೆ ಸಂಬಂಧಿಸಿದ್ದಾಗಿದೆ. ಈ ವರ್ಷ ಇಂತಹಾ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ.