ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮುಅಮ್ಮರ್ ಗಡಾಫಿ ಪಡೆ ಆಶ್ರಯಕ್ಕೆ ಅಲ್ಜೀರಿಯಾ ನಕಾರ
(Muammar Gaddafi,Libya, Algeria,Latest News in Kannada, Kannada News, International News in Kannada, Latest International News)
ಮುಅಮ್ಮರ್ ಗಡಾಫಿ ಪಡೆ ಆಶ್ರಯಕ್ಕೆ ಅಲ್ಜೀರಿಯಾ ನಕಾರ
ಅಲ್ಜಿರೀಸ್, ಸೋಮವಾರ, 5 ಸೆಪ್ಟೆಂಬರ್ 2011( 13:42 IST )
ಲಿಬಿಯಾದಲ್ಲಿ ಬಂಡುಕೋರ ಪಡೆಗಳು ಆಡಳಿತವನ್ನು ತಮ್ಮ ವಶಕ್ಕೆ ಪಡೆದಿರುವುದರಿಂದ ಕಂಗಾಲಾಗಿರುವ ಮುಅಮ್ಮರ್ ಗಡಾಫಿ ಪರ ಅಧಿಕಾರಿಗಳು ಲಿಬಿಯಾ- ಅಲ್ಜೀರಿಯಾ ಗಡಿ ಪ್ರದೇಶಕ್ಕೆ ಓಡಿ ಹೋಗಿದ್ದು, ತಮಗೆ ಆಶ್ರಯ ನೀಡುವಂತೆ ಸಲ್ಲಿಸಿದ್ದ ಮನವಿಯನ್ನು ಅಲ್ಜೀರಿಯಾ ಸರಕಾರ ನಿರಾಕರಿಸಿದೆ.
ಮುಅಮ್ಮರ್ ಗಡಾಫಿಯ ಆಡಳಿತದಲ್ಲಿ ಕಾರ್ಯನಿರ್ವಹಿಸುತ್ತಿದ್ದ 30 ಅಧಿಕಾರಿಗಳನ್ನೊಳಗೊಂಡ 12 ವಾಹನಗಳು ಮತ್ತು ಸಶಸ್ತ್ರ ಯೋಧರಿದ್ದ ನಾಲ್ಕು ವಾಹನಗಳನ್ನು ಅಲ್ಜೀರಿಯಾ ರಾಜಧಾನಿ ಅಲ್ಜೀರೀಸ್‌ನಿಂದ 200 ಕಿಲೋ ಮೀಟರ್ ದೂರದಲ್ಲಿರುವ ಡೆಬೆಬ್ ಬಂದರಿನಲ್ಲಿ ಕಳೆದ ವಾರ ತಡೆಹಿಡಿಯಲಾಗಿತ್ತು.
ಅಲ್ಜೀರಿಯಾ ಗಡಿಯ ಬಳಿ ಬಂದ ಲಿಬಿಯಾದ ಮಾಜಿ ಅಧಿಕಾರಿಗಳನ್ನೊಳಗೊಂಡ ಮೂರು ವಾಹನಗಳು ಅಲ್ಜೀರಿಯಾ ಅಧಿಕಾರಿಗಳಿಗೆ ತಮ್ಮ ಹೆಸರಿನ ವಿವರವನ್ನು ನೀಡುವುದರೊಂದಿಗೆ ಆಶ್ರಯ ನೀಡುವಂತೆ ಕೋರಿದ್ದರು ಎಂದು ಅಲ್ ಖಬರ್ ಅರೆಬಿಕ್ ಪತ್ರಿಕೆಯಲ್ಲಿ ಬಂದಿದ್ದ ವರದಿಯನ್ನು ಉಲ್ಲೇಖಿಸಿ ಕ್ಸಿನ್ ಹುವಾ ವರದಿ ಮಾಡಿದೆ.
ಆಶ್ರಯ ಕೋರಿದ್ದವರ ಪೈಕಿ ಬಹುತೇಕ ಮಂದಿ ಮುಅಮ್ಮರ್ ಗಡಾಫಿಯ ಅಧಿಕಾರಾವಧಿಯಲ್ಲಿ ಸೇನಾಧಿಕಾರಿಗಳಾಗಿದ್ದವರು ಹಾಗೂ ಗುಪ್ತಚರ ಇಲಾಖೆ ಅಧಿಕಾರಿಗಳಾಗಿದ್ದರಿಂದ ಅಲ್ಜೀರಿಯಾ ಅಧಿಕಾರಿಗಳು ಅವರಿಗೆ ಆಶ್ರಯ ನೀಡಲು ನಿರಾಕರಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ ಎಂದು ಮಾಧ್ಯಮ ವರದಿಯಲ್ಲಿ ತಿಳಿಸಲಾಗಿದೆ.
ಮುಅಮ್ಮರ್ ಗಡಾಫಿ ಅಧಿಕಾರದಲ್ಲಿದ್ದ ಅಧಿಕಾರಿಗಳಿಗೆ ಆಶ್ರಯ ನೀಡಿದರೆ ಲಿಬಿಯಾದಲ್ಲಿ ನಡೆಯುತ್ತಿರುವ ಸಂಘರ್ಷಕ್ಕೆ ಕುಮ್ಮಕ್ಕು ನೀಡಿದಂತಾಗುತ್ತದೆ ಎಂಬ ಕಾರಣಕ್ಕಾಗಿಯೇ ಆಶ್ರಯ ನಿರಾಕರಿಸಲು ಕಾರಣ ಎಂದು ಮೂಲಗಳು ತಿಳಿಸಿವೆ.
ಲಿಬಿಯಾ ಅಧ್ಯಕ್ಷ ಮುಅಮ್ಮರ್ ಗಡಾಫಿ ಅವರ ಪತ್ನಿ,ಪುತ್ರಿ ಹಾಗೂ ಇಬ್ಬರು ಪುತ್ರರು ಕಳೆದ ವಾರ ಅಲ್ಜೀರಿಯಾ ಗಡಿ ಪ್ರವೇಶಿಸಿದ ನಂತರ ಅಲ್ಜೀರಿಯಾ ದಕ್ಷಿಣ ಭಾಗದಲ್ಲಿದ್ದ ಗಡಿಯನ್ನು ಮುಚ್ಚಿತ್ತು.