ಚೀನಾ ಗಡಿಯಲ್ಲಿ ಅಣ್ವಸ್ತ್ರಗಳನ್ನು ಸಂಗ್ರಹಿಸುತ್ತಿದೆ ಎಂಬ ಆಪಾದನೆಗಳ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಚೀನಾ, ತಾನು ನೆರೆ ರಾಷ್ಟ್ರಗಳಿಗೆ ಯಾವುದೇ ಬೆದರಿಕೆಯೊಡ್ಡುತ್ತಿಲ್ಲ ಎಂದು ಹೇಳಿದೆಯಲ್ಲದೇ ಸ್ಥಳೀಯ ವಿವಾದಗಳನ್ನು ಮಾತುಕತೆಯ ಮೂಲಕವೇ ಬಗೆಹರಿಸಿಕೊಳ್ಳುವುದಾಗಿ ಭರವಸೆ ನೀಡಿದೆ.
ಚೀನಾ ದೇಶದ ಉತ್ಪನ್ನಗಳನ್ನು ಬೇರೆ ದೇಶಗಳು ಆಮದು ಮಾಡಿಕೊಳ್ಳುತ್ತಿರುವ ಮೊತ್ತವು ಮುಂದಿನ ಐದು ವರ್ಷಗಳಲ್ಲಿ 8ಲಕ್ಷ ಕೋಟಿ ತಲುಪುವ ಸಾಧ್ಯತೆಯಿದ್ದು, ಜಾಗತಿಕವಾಗಿ ಇನ್ನಷ್ಟು ಅಭಿವೃದ್ಧಿ ಹೊಂದುವುದಾಗಿ ಭರವಸೆಯಿದೆ ಎಂದು ತಿಳಿಸಿದೆ.
ಅಂತಾರಾಷ್ಟ್ರೀಯ ಹೊಣೆಗಾರಿಕೆಯ ಕುರಿತು ಭರವಸೆ ನೀಡಿರುವ ಚೀನಾ, ನೆರೆಯ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ ಎಂದು ಚೀನಾ ಸರಕಾರ ಬಿಡುಗಡೆ ಮಾಡಿದ ಶ್ವೇತಪತ್ರದಲ್ಲಿ ತಿಳಿಸಿದೆ.
ನೆರೆಯ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಹೊಂದುವ ಮೂಲಕ ಏಷ್ಯಾಖಂಡದಲ್ಲಿ ಸೌಹಾರ್ದ ವಾತಾವರಣ ಮೂಡಿಸಲಾಗುತ್ತದೆ ಎಂದು ಚೀನಾ ತಿಳಿಸಿದೆ.
ಭಾರತದೊಂದಿಗಿನ ಗಡಿ ಸಮಸ್ಯೆ ಹಾಗೂ ಆಸಿಯಾನ್ ರಾಷ್ಟ್ರಗಳೊಂದಿಗೆ ಇರುವ ಸಮುದ್ರ ತೀರದ ವಿವಾದ ಹಾಗೂ ಜಪಾನ್ ನೊಂದಿಗೆ ಇರುವ ಐತಿಹಾಸಿಕ ವೈರತ್ವದ ಕುರಿತು ಪ್ರತಿಕ್ರಿಯಿಸಿರುವ ಚೀನಾ, ಈ ಪ್ರದೇಶದ ರಾಷ್ಟ್ರಗಳು ಪರಸ್ಪರ ಗೌರವಿಸುವ ಮೂಲಕ ಪರಸ್ಪರ ವಿಶ್ವಾಸ ವೃದ್ಧಿಸಬೇಕು ಎಂದು ಸಲಹೆ ನೀಡಿದೆ.
ನೆರೆಯ ರಾಷ್ಟ್ರಗಳೊಂದಿಗೆ ಇರುವ ಭೂ ವಿವಾದವನ್ನು ಸೌಹಾರ್ದಯುತ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬಹುದು ಎಂದು ಚೀನಾ ತಿಳಿಸಿದೆ.