ಚೀನಾದ ಕ್ಸಿನ್ ಜಿಯಾಂಗ್ ಪ್ರಾಂತ್ಯದಲ್ಲಿ ನಾಗರಿಕರನ್ನು ಗುರಿಯಾಗಿರಿಸಿಕೊಂಡು ಇತ್ತೀಚೆಗೆ ನಡೆದ ಹಿಂಸಾಚಾರಕ್ಕೆ ಹೊಣೆ ಹೊತ್ತಿರುವ ಉಗ್ರಗಾಮಿ ಸಂಘಟನೆಯೊಂದು ಈ ಕುರಿತ ವೀಡಿಯೋ ಬಿಡುಗಡೆ ಮಾಡಿದೆ.
ತನ್ನನ್ನು ಟರ್ಕಿಸ್ತಾನ್ ಇಸ್ಲಾಮಿಕ್ ಪಾರ್ಟಿ (ಟಿಐಪಿ)ಎಂದು ಕರೆದುಕೊಂಡಿರುವ ಗುಂಪೊಂದು ಚೀನಾದಿಂದ ಕ್ಸಿನ್ ಜಿಯಾಂಗ್ ಪ್ರಾಂತ್ಯವನ್ನು ಮುಕ್ತಗೊಳಿಸುವುದಕ್ಕಾಗಿ ಹೋರಾಡುತ್ತಿರುವುದಾಗಿ ಇತ್ತೀಚೆಗೆ ಬಿಡುಗಡೆ ಮಾಡಿರುವ ವೀಡಿಯೋದಲ್ಲಿ ತಿಳಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಸೈಟ್ ಬೇಹುಗಾರಿಕಾ ವೆಬ್‌ಸೈಟ್, ಟಿಐಪಿ ಉಗ್ರಗಾಮಿ ಸಂಘಟನೆ ಪಾಕಿಸ್ತಾನ ಮೂಲದ್ದಾಗಿದ್ದು, ಅಲ್ ಖೈದಾ ಹಾಗೂ ತಾಲಿಬಾನ್ ಉಗ್ರಗಾಮಿ ಸಂಘಟನೆಗಳಿಂದ ತರಬೇತಿ ಪಡೆಯುತ್ತಿದೆ ಎಂದು ತಿಳಿಸಿದೆ.
ಈ ಕುರಿತು ಬಿಡುಗಡೆ ಮಾಡಿರುವ ವೀಡಿಯೋದಲ್ಲಿ ಮಾತನಾಡಿರುವ ಟಿಐಪಿ ಮುಖಂಡ ಅಬ್ದುಲ್ ಶಾಕೋರ್ ದಾಮ್ಲಾ, ಕಳೆದ ತಿಂಗಳು ಕ್ಸಿನ್ ಜಿಯಾಂಗ್ ಪ್ರಾಂತ್ಯದ ಕಾಶೀಂಗರ್ ನಲ್ಲಿ ನಡೆಸಿದ ದಾಳಿಗೆ ತಮ್ಮ ಸಂಘಟನೆ ಹೊಣೆಯಾಗಿದೆ ಎಂದು ತಿಳಿಸಿದ್ದಾನೆ. ಉಗ್ರರ ಈ ದಾಳಿಯಲ್ಲಿ 22 ಮಂದಿ ನಾಗರಿಕರು ಹಾಗೂ ಎಂಟು ಮಂದಿ ಉಗ್ರರು ಮೃತಪಟ್ಟಿದ್ದರು.
ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದ ಚೀನಾ, ಪಾಕಿಸ್ತಾನ ಮೂಲದ ಈಸ್ಟ್ ಟರ್ಕಿಸ್ತಾನ್ ಇಸ್ಲಾಮಿಕ್ ಮೂವ್‌ಮೆಂಟ್(ಇಟಿಐಎಂ) ಉಗ್ರಗಾಮಿ ಸಂಘಟನೆಯೇ ಇದಕ್ಕೆ ಕಾರಣ ಎಂದು ಆಪಾದಿಸಿತ್ತು.
ಉಗ್ರಗಾಮಿ ಸಂಘಟನೆ ಬಿಡುಗಡೆ ಮಾಡಿರುವ ವೀಡಿಯೋ ಕುರಿತು ಪ್ರತಿಕ್ರಿಯಿಸಿರುವ ಚೀನಾದ ವಿದೇಶಾಂಗ ಇಲಾಖೆ ವಕ್ತಾರ ಲ್ಯೂ ಮೆಮಿನ್, ಉಗ್ರರ ನಿಗ್ರಹಕ್ಕಾಗಿ ಜಂಟಿ ಕಾರ್ಯಾಚರಣೆ ಅಗತ್ಯ ಎಂದು ಹೇಳಿದ್ದಾರೆ.