ವಾಷಿಂಗ್ಟನ್, ಶುಕ್ರವಾರ, 9 ಸೆಪ್ಟೆಂಬರ್ 2011( 13:30 IST )
ಭಯೋತ್ಪಾದಕರ ವಿರುದ್ಧ ಸಾರಿರುವ ಸಮರದಲ್ಲಿ ಪಾಕಿಸ್ತಾನವು ಅಮೆರಿಕದ ವಿಶ್ವಾಸಕ್ಕೆ ಅನರ್ಹವಾಗಿರುವುದರಿಂದ ಅಫ್ಘಾನಿಸ್ತಾನದ ಸಮಸ್ಯೆಯನ್ನು ಪರಿಹರಿಸಲು ಭಾರತವನ್ನು ನಿಯೋಜಿಸುವಂತೆ ಅಮೆರಿಕದ ಹಿರಿಯ ಸೆನೆಟರ್ ಒಬ್ಬರು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಒತ್ತಾಯಿಸಿದ್ದಾರೆ.
ಪಾಕಿಸ್ತಾನವು ತನ್ನ ನಿಲುವುಗಳನ್ನು ಬದಲಿಸಿಕೊಳ್ಳದಿದ್ದರೆ ನಾವು ಬೇರೆಯದಾಗಿಯೇ ಚಿಂತಿಸಬೇಕಾಗುತ್ತದೆ ಎಂದು ಹೇಳಿರುವ ಅಮೆರಿಕದ ಸೆನೆಟರ್, ಐಎಸ್‌ಐ ಹಾಗೂ ಭಯೋತ್ಪಾದಕರ ವಿರುದ್ಧ ಹೋರಾಡುತ್ತಿರುವ ಅಫ್ಘಾನ್ ಸರಕಾರಕ್ಕೆ ನೆರವು ನೀಡಲು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತವನ್ನು ನಿಯೋಜಿಸಲಾಗುವುದು ಎಂದು ಸೆನೆಟರ್ ಮಾರ್ಕ್ ಕಿರ್ಕ್ ಹೇಳಿದ್ದಾರೆ. ನೌಕಾದಳದ ಬೇಹುಗಾರಿಕಾ ಕಮಾಂಡರ್ ಆಗಿರುವ ಮಾರ್ಕ್ ಕಿರ್ಕ್ ಅಫ್ಘಾನಿಸ್ತಾನಕ್ಕೆ ಎರಡು ವಾರಗಳ ಕಾಲ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಹೇಳಿಕೆ ನೀಡಿದ್ದಾರೆ.
ಪಾಕಿಸ್ತಾನವು ಸುಳ್ಳುಹೇಳುವ ಮೂಲಕ ವಿಶ್ವಾಸವನ್ನು ಕಳೆದುಕೊಂಡಿರುವುದರಿಂದ ಅಫ್ಘಾನಿಸ್ತಾನದಲ್ಲಿ ಭಯೋತ್ಪಾದನೆ ನಿಗ್ರಹಿಸಿ ಆಡಳಿತ ಮರುಸ್ಥಾಪಿಸಲು ಅಫ್ಘಾನ್ ಸರಕಾರಕ್ಕೆ ನೆರವು ನೀಡಲು ಭಾರತವನ್ನು ನಿಯೋಜಿಸುವ ಮೂಲಕ ಅಫ್ಘಾನಿಸ್ತಾನದಲ್ಲಿರುವ ಅಮೆರಿಕ ಸೇನಾ ಪಡೆಗಳನ್ನು ಕಡಿತಗೊಳಿಸಲು ಸಹಕಾರಿಯಾಗುವುದಲ್ಲದೇ ಅಫ್ಘಾನಿಸ್ತಾನವು ಉಗ್ರರ ಇನ್ನೊಂದು ಸ್ವರ್ಗವಾಗುವುದನ್ನು ತಪ್ಪಿಸಬಹುದು ಎಂದು ತಿಳಿಸಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಆಡಳಿತ ಮರುಸ್ಥಾಪಿಸಲು ಭಾರತ ನೆರವು ನೀಡುವುದಕ್ಕೆ ಪಾಕಿಸ್ತಾನವು ಆಕ್ಷೇಪ ವ್ಯಕ್ತಪಡಿಸಬಹುದು. ಆದರೆ ಪಾಕಿಸ್ತಾನವು ತಮ್ಮದೇಶದ ಐಎಸ್‌ಐ ಸಂಸ್ಥೆಯನ್ನು ನಿಂದಿಸಬೇಕು. ಸೆಪ್ಟೆಂಬರ್ 11ರಂದು ಪೆಂಟಾಗನ್ ಮತ್ತು ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ಉಗ್ರರು ನಡೆಸಿದ್ದ ದಾಳಿಯಿಂದ ಪಾಠ ಕಲಿತಿರುವ ಅಮೆರಿಕಕ್ಕಾಗಲೀ ಅಥವಾ ಭಾರತಕ್ಕಾಗಲೀ ಅಫ್ಘಾನಿಸ್ತಾನವು ಉಗ್ರರ ಮತ್ತೊಂದು ಸ್ವರ್ಗವಾಗುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಕಿರ್ಕ್ ತಿಳಿಸಿದ್ದಾರೆ.