ವಾಷಿಂಗ್ಟನ್, ಶುಕ್ರವಾರ, 9 ಸೆಪ್ಟೆಂಬರ್ 2011( 17:47 IST )
ಅಮೆರಿಕದ ಪೆಂಟಾಗನ್ ಮತ್ತು ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ಉಗ್ರರು 2001ರಂದು ಉಗ್ರರು ದಾಳಿ ನಡೆಸಿ ಹತ್ತು ವರ್ಷ ಕಳೆದಿರುವ ಸಂದರ್ಭದಲ್ಲಿ ಉಗ್ರರು ಮತ್ತೆ ದಾಳಿ ನಡೆಸಲಿದ್ದಾರೆಯೇ ಎಂಬುದರ ಕುರಿತು ಅಮೆರಿಕದ ಅಧಿಕಾರಿಗಳು ಇದು ನಿದಿಷ್ಟ ಹಾಗೂ ವಿಶ್ವಾಸಾರ್ಹವಾಗಿದೆ ಎಂದು ಹೇಳಿದ್ದರೂ ಈ ಕುರಿತ ಮಾಹಿತಿಯ ಬಗ್ಗೆ ಸ್ಪಷ್ಟಪಡಿಸಿಲ್ಲ.
ಪೆಂಟಾಗನ್ ದಾಳಿಯ ದಶಮಾನೋತ್ಸವದ ಸಂದರ್ಭದಲ್ಲಿ ದಾಳಿ ನಡೆಸಲಾಗುತ್ತದೆ ಎಂದು ನಂಬಲಾಗಿದ್ದು, ಈ ದುಷ್ಕೃತ್ಯಕ್ಕೆ ಸಂಚು ನಡೆಸಿರುವವರ ಪೈಕಿ ಅಮೆರಿಕದ ಪ್ರಜೆಯೊಬ್ಬರೂ ಸೇರಿದಂತೆ ಮೂರು ಮಂದಿ ಭಾಗಿಯಾಗಿದ್ದಾರೆ ಎಂದು ಭಾವಿಸಿರುವ ಅಮೆರಿಕದ ಅಧಿಕಾರಿಗಳು ಸ್ಫೋಟಕಗಳನ್ನು ತುಂಬಿದ್ದ ವಾಹನವನ್ನು ದಾಳಿಗೆ ಬಳಸಲಿದ್ದಾರೆ ಎಂದು ಹೇಳಿದ್ದರು. ಆದರೆ ಈ ಕುರಿತು ಅಮೆರಿಕ ಗುಪ್ತಚರ ಇಲಾಖೆ ಖಚಿತಪಡಿಸಿಲ್ಲ ಎಂದು ಗುಪ್ತಚರ ಇಲಾಖೆ ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಸಿಎನ್‌ಎನ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಅಮೆರಿಕದ ಆಂತರಿಕ ಭದ್ರತಾ ಇಲಾಖೆಯ ವಕ್ತಾರ ಮ್ಯಾಥ್ಯೂ ಚಾಂಡ್ಲೆರ್, ದಾಳಿ ದಶಮಾನೋತ್ಸವದ ಸಂದರ್ಭದಲ್ಲಿ ಉಗ್ರರು ಮತ್ತೆ ದಾಳಿ ನಡೆಸಲಿದ್ದಾರೆ ಎಂಬ ಸುದ್ದಿ ನಿರ್ದಿಷ್ಟವಾಗಿದ್ದರೂ ಈ ಕುರಿತು ಖಚಿತಪಡಿಸಲಾಗಿಲ್ಲ ಎಂದು ಹೇಳಿದ್ದಾರೆ.
ಪಾಕಿಸ್ತಾನ- ಅಫ್ಘಾನಿಸ್ತಾನದ ಬುಡಕಟ್ಟು ಪ್ರದೇಶದಿಂದಲೇ ಅಮೆರಿಕದ ಮೇಲೆ ದಾಳಿ ನಡೆಸುವ ಕುರಿತು ಮಾಹಿತಿ ನೀಡಲಾಗಿದೆ ಎಂದು ಫೆಡರಲ್ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅಮೆರಿಕದ ಆಂತರಿಕ ಭದ್ರತಾ ಸಮಿತಿಯ ಅಧ್ಯಕ್ಷ ಪೀಟರ್‌ಕಿಂಗ್, ಅಮೆರಿಕದ ಜನ ಪ್ರತಿನಿಧಿಗಳಿಗೆ ದಾಳಿಯ ಬಗ್ಗೆ ನಿರ್ದಿಷ್ಟ ವಿವರ ದೊರೆತಿದೆ, ಈ ಕುರಿತು ತನಿಖಾ ಸಂಸ್ಥೆಗಳು ಹಲವಾರು ಕೋನಗಳಿಂದ ಪರಿಶೀಲಿಸುತ್ತಿವೆ ಎಂದು ಹೇಳಿದ್ದಾರೆ.
ಭಯೋತ್ಪಾದಕರು ದಾಳಿ ನಡೆಸುವ ಕುರಿತು ಮಾಹಿತಿಗಳು ದೊರೆತಿರುವ ಹಿನ್ನೆಲೆಯಲ್ಲಿ ಎಲ್ಲ ಅಗತ್ಯ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧ್ಯಕ್ಷ ಬರಾಕ್ ಒಬಾಮಾ ಬೇಹುಗಾರಿಕಾ ಸಂಸ್ಥೆ ಮತ್ತು ಆಡಳಿತಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಸಿಎನ್‌ಎನ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಕುರಿತು ಗುರುವಾರ ಮಾಹಿತಿ ನೀಡಿದ್ದ ಅಮೆರಿಕದ ಆಂತರಿಕ ಭದ್ರತಾ ಇಲಾಖೆಯ ಕಾರ್ಯದರ್ಶಿ ಜೆನೆಟ್ ನಪೊಲಿಟಾನೋ, ಗುಪ್ತಚರ ಇಲಾಖೆ ಅಧಿಕಾರಿಗಳು ಜೆಹಾದಿ ವೆಬ್ ಸೈಟ್‌ಗಳಿಂದ ಪೆಂಟಾಗನ್ ಕಟ್ಟಡದ ಮೇಲೆ ನಡೆದ ದಾಳಿಯ ದಶಮಾನೋತ್ಸವದ ಸಂದರ್ಭದಲ್ಲಿ ಮತ್ತೆ ದಾಳಿ ನಡೆಸುವ ಕುರಿತ ವಿವರಗಳನ್ನು ಸಂಗ್ರಹಿಸಿದ್ದಾರೆ. ಇದನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ತಿಳಿಸಿದ್ದಾರೆ.