ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 9/11: 10 ವರ್ಷವಾದ್ರೂ ಅಮೆರಿಕಕ್ಕೆ ಮತ್ತೂ ದಾಳಿ ಭಯವಂತೆ!
(America | al Qaeda| 9/11Anniversary threat | International News in Kannada,)
9/11: 10 ವರ್ಷವಾದ್ರೂ ಅಮೆರಿಕಕ್ಕೆ ಮತ್ತೂ ದಾಳಿ ಭಯವಂತೆ!
ವಾಷಿಂಗ್ಟನ್, ಶುಕ್ರವಾರ, 9 ಸೆಪ್ಟೆಂಬರ್ 2011( 20:52 IST )
ಅಲ್‌ಖೈದಾ ಉಗ್ರರು ಎರಡು ವಿಮಾನಗಳನ್ನು ಹೈಜಾಕ್ ಮಾಡಿ ವರ್ಲ್ಡ್ ಟ್ರೇಡ್ ಸೆಂಟರ್ ಮತ್ತು ಪೆಂಟಾಗನ್ ಕಟ್ಟಡದ ಮೇಲೆ 2001ಸೆಪ್ಟೆಂಬರ್ 11ರಂದು ದಾಳಿ ನಡೆಸಿದ್ದ ಸಂದರ್ಭದಲ್ಲಿ 3 ಸಾವಿರ ಜನರು ಮೃತಪಟ್ಟಿದ್ದರು. ಈ ದಾಳಿಯ ಹಿನ್ನೆಲೆಯಲ್ಲಿ ವಿಶ್ವಾದ್ಯಂತ ಅತಿದೊಡ್ಡ ಜಾಲವೇ ಇದೆ ಎನ್ನಲಾಗಿದ್ದು, ಈ ದಾಳಿ ನಡೆದು 10 ಪೂರೈಸಿರುವ ಹಿನ್ನೆಲೆಯಲ್ಲಿ ಮತ್ತೆ ಅದೇ ರೀತಿಯ ದಾಳಿ ನಡೆಸಬಹದು ಎಂಬ ಭೀತಿ ಅಮೆರಿಕವನ್ನು ಕಾಡುತ್ತಿದೆ.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆಲವು ಆರೋಪಿಗಳನ್ನು ಬಂಧಿಸಿ ಹತ್ಯೆಮಾಡಲಾಗಿದೆ. ಇನ್ನೂ ಕೆಲವು ಆರೋಪಿಗಳನ್ನು ಗುರುತಿಸಲಾಗಿಲ್ಲ. 9/11 ದಾಳಿಯ ಅರ್ಧಕ್ಕೂ ಹೆಚ್ಚು ಆರೋಪಿಗಳಿನ್ನೂ ವಿಚಾರಣೆಯನ್ನು ಎದುರಿಸುತ್ತಿದ್ದಾರೆ.
9/11 ದಾಳಿಯ ಕುರಿತು ವಿಚಾರಣೆ ನಡೆಸಿದ ಅಮೆರಿಕ, ದಾಳಿಗೆ ಸಂಚು ರೂಪಿಸಿದ ಆರೋಪಿಗಳೊಂದಿಗೆ ನೇರ ಸಂಪರ್ಕ ಹೊಂದಿರುವ ಆರೋಪಿಗಳನ್ನು ಗುರುತಿಸಿದೆ.
ಒಸಾಮಾಬಿನ್ ಲಾಡೆನ್: ಸೌದಿ ಅರೇಬಿಯಾದಲ್ಲಿ ಜನಿಸಿದ ಒಸಾಮಾ ಬಿನ್ ಲಾಡೆನ್‌ನನ್ನು ಸೌದಿ ಅರೇಬಿಯಾ ಗಡೀಪಾರು ಮಾಡಿದ ನಂತರ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ತಲೆ ಮರೆಸಿಕೊಂಡಿದ್ದ. ಅಮೆರಿಕದ ಮೇಲೆ ನಡೆದ 9/11 ದಾಳಿಗೆ ಈತನೇ ಸಂಚು ರೂಪಿಸಿದ್ದ ಎಂದು ಆಪಾದಿಸಲಾಗಿತ್ತು. ತನ್ನ ಪತ್ತೆಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದ ಅಮೆರಿಕಕ್ಕೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ ಒಸಾಮಾ ಬಿನ್ ಲಾಡೆನ್, ಕಡೆಗೂ 2011ರ ಮೇ 1ರಂದು ಪಾಕಿಸ್ತಾನದ ಅಬೋಟಾಬಾದ್‌ನಲ್ಲಿ ಅಮೆರಿಕದ ಕಮಾಂಡೋಪಡೆಗಳು ನಡೆಸಿದ ದಾಳಿಯಲ್ಲಿ ಹತನಾಗಿದ್ದ.
ಐಮನ್ ಅಲ್ ಜವಾಹಿರಿ: ಈಜಿಪ್ಟ್‌ನ ಜೆಹಾದಿ ಸಂಘಟನೆಯ ನೇತೃತ್ವ ವಹಿಸಿದ್ದ ಐಮನ್ ಅಲ್ ಜವಾಹಿರಿ 1998ರಲ್ಲಿ ತನ್ನ ಸಂಘಟನೆಯನ್ನು ಅಲ್‌ಖೈದಾದೊಂದಿಗೆ ವಿಲೀನಗೊಳಿಸಿದ್ದ. ಮೂಲತಃ ಈಜಿಪ್ಟ್‌ನ ವೈದ್ಯನಾಗಿದ್ದ ಜವಾಹಿರಿ ಅಮೆರಿಕ ದಾಳಿಯ ಸಂದರ್ಭದಲ್ಲಿ ಅಲ್‌ಖೈದಾದ ಉಪ ನಾಯಕನಾಗಿದ್ದು, ಲಾಡೆನ್ ಹತನಾದ ನಂತರ ಅಲ್‌ಖೈದಾ ಉಗ್ರಗಾಮಿ ಸಂಘಟನೆಯ ನೇತೃತ್ವ ವಹಿಸಿದ್ದಾನೆ. ಈ ತನನ್ನು ಹಿಡಿದುಕೊಟ್ಟವರಿಗೆ ಅಮೆರಿಕ 2. 50ಲಕ್ಷ ಡಾಲರ್ ಬಹುಮಾನ ಘೋಷಿಸಿದೆ.
ಖಲೀದ್ ಶೇಖ್ ಮಹಮದ್: ಪಾಕಿಸ್ತಾನ ಮೂಲದ ಖಲೀದ್ ಶೇಖ್ ಮಹಮದ್ ದಾಳಿಯ ಸಂಚು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಾಗೂ 1993ರಲ್ಲಿ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ನಡೆದ ಬಾಂಬ್ ದಾಳಿಯಲ್ಲೂ ಈತ ಪ್ರಮುಖ ಪಾತ್ರ ಎಂದು ಅಮೆರಿಕ ಆರೋಪ ಪಟ್ಟಿ ದಾಖಲಿಸಿತ್ತು. ಈತನನ್ನು ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಅಮೆರಿಕ -ಪಾಕ್ ಪಡೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ 2003ರ ಮಾರ್ಚ್ 1ರಂದು ಈತನನ್ನು ಬಂಧಿಸಲಾಗಿತ್ತು. ಈತ ಈಗ ಅಮೆರಿಕ ಸೇನಾಪಡೆಯ ವಶದಲ್ಲಿದ್ದಾನೆ.
ಜಕಾರಿಯಾಸ್ ಮೌಸೋಯಿ: ಫ್ರೆಂಚ್ ಪ್ರಜೆಯಾಗಿರುವ ಜಕಾರಿಯಾಸ್ ಮೌಸೋಯಿ,ಮೊರಾಕ್ಕೋ ಮರುಭೂಮಿಯಲ್ಲಿ ವಾಸಿಸುತ್ತಿದ್ದು, ಈತ 2001ರಲ್ಲಿ ನಡೆದ ದಾಳಿಯ ಸಂಚಿನಲ್ಲಿ ಭಾಗಿಯಾಗಿದ್ದ ಎಂದು ಅಮೆರಿಕ ನ್ಯಾಯಾಲಯ ಆಪಾದಿಸಿತ್ತು. 2001ರ ಆಗಸ್ಟ್ 1ರಂದು ಈತನನ್ನು ಮಿನೆಸ್ಟೋದಲ್ಲಿ ಬಂಧಿಸಲಾಗಿತ್ತು. ಈತ ತನ್ನ ತಪ್ಪು ಒಪ್ಪಿಕೊಂಡಿದ್ದರಿಂದ ವರ್ಜೀನಿಯಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ವಾಲಿದ್ ಬಿನ್ ಅತ್ತಾಶ್, ರಂಜಿ ಬಿನ್ ಅಲ್ ಸಬಾ, ಅಲ್ ಅಬ್ದುಲ್ ಅಜೀಜ್ ಅಲಿ, ಮುಸ್ತಫಾ ಅಲ್ ಹೌಸವಾಯ್: ಇವರೆಲ್ಲರೂ ಖಲೀದ್ ಶೇಖ್ ಮೊಹಮದ್‌ನೊಂದಿಗೆ ಸಹ ಆರೋಪಿಗಳಾಗಿದ್ದಾರೆ ಎಂದು ಅಮೆರಿಕ ಆಪಾದಿಸಿತ್ತು. ಅತ್ತಾಸ್ ಅಲ್ ಶಿಬಾ ಯೆಮನ್ ಮೂಲದವನು, ಅಲ್ ಅಜೀಜ್ ಕುವೈಟ್ ಹಾಗೂ ಅಲ್ ಹೌಸಾವಿ ಸೌದಿ ಅರೇಬಿಯಾ ಮೂಲದವರು.
ಬಿನ್ ಅತ್ತಾಸ್‌ನನ್ನು ಪಾಕಿಸ್ತಾನದಲ್ಲಿ 2003ರ ಏಪ್ರಿಲ್ 27ರಂದು, ಅಲ್ ಸಬಾನನ್ನು 2002ರ ಸೆಪ್ಟೆಂಬರ್ 11ರಂದು ಕರಾಚಿಯಲ್ಲಿ, ಅಲ್ ಹೌಸಾವಿಯನ್ನು 2003ರ ಮಾರ್ಚ್ 1ರಂದು ರಾವಲ್ಪಿಂಡಿಯಲ್ಲಿ ಹಾಗೂ ಅಲ್ ಅಬ್ದುಲ್ ಅಜೀಜ್ ಅಲಿಯನ್ನು 2003ರ ಏಪ್ರಿಲ್ 29ರಂದು ಕರಾಚಿಯಲ್ಲಿ ಪಾಕಿಸ್ತಾನದ ಅಧಿಕಾರಿಗಳು ಬಂಧಿಸಿದ್ದು, ಇವರೆಲ್ಲರೂ ಅಮೆರಿಕ ಮಿಲಿಟರಿ ವಶದಲ್ಲಿದ್ದಾರೆ.
ಮಹಮದ್ ಅಲ್ ಖಾಟ್ನಿ: ಅಮೆರಿಕದ ಮೇಲೆ ದಾಳಿ ನಡೆಸಲು ವಿಮಾನವನ್ನು ಅಪಹರಿಸಿದ 9 ಮಂದಿಯ ಪೈಕಿ ಈತನೂ ಒಬ್ಬ ಎಂದು ಅಮೆರಿಕ ಆಪಾದಿಸಿದ್ದು, ಈತನನ್ನು ಪಾಕ್- ಅಫ್ಘಾನ್ ಗಡಿಯಲ್ಲಿ 2001ರ ಡಿಸೆಂಬರ್ 1 ರಂದು ಬಂಧಿಸಿದ್ದು, ಪ್ರಸ್ತುತ ಈತ ಅಮೆರಿಕ ಸೇನೆಯ ವಶದಲ್ಲಿದ್ದಾನೆ.
ಅಬ್ದೆಲ್ ಗನಿ ಮಜೌದಿ, ಮೌನಿರ್ ಅಲ್ ಮೊಟಾಸ್ಡೆಕ್‌ರನ್ನು ಅಮೆರಿಕದ ಮೇಲೆ ನಡೆದ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್‌ದಾರೆ ಎಂದು ಆಪಾದಿಸಲಾಗಿದ್ದು, ಮೌನಿರ್ ಅಲ್ ಮೊಟಾಸ್ಡೆಕ್‌ನನ್ನು 2001ರ ನವೆಂಬರ್ 29 ಹ್ಯಾಂಬರ್ಗ್‌ನಲ್ಲಿ ಬಂಧಿಸಲಾಗಿದ್ದು, ಈತ ಈಗ ಜರ್ಮನಿಯ ಜೈಲಿನಲ್ಲಿದ್ದಾನೆ. ಮಜೌದಿಯನ್ನು 2002ರ ಅಕ್ಟೋಬರ್ 10ರಂದು ಬಂಧಿಸಲಾಗಿತ್ತು. ವಿಚಾರಣೆಯ ನಂತರ ದೋಷಮುಕ್ತಗೊಂಡ ಈತ ಮೊರಾಕ್ಕೋಗೆ ಮರಳಿದ್ದ.
ಅನ್ವರ್ ಅಲ್ ಅವ್ಲಾಕಿ: ಅಮೆರಿಕ ಮತ್ತು ಯೆಮನ್ ನಾಗರಿಕತ್ವ ಪಡೆದ ಮುಸ್ಲಿಂ ಪಂಡಿತ ನಾಗಿರುವ ಈತ ಯೆಮನ್‌ನಲ್ಲಿರುವ ಅಲ್‌ಖೈದಾ ಸಂಘಟನೆಯ ನೇತೃತ್ವ ವಹಿಸಿದ್ದ ಎಂದು ಅಮೆರಿಕ ಅಧಿಕಾರಿಗಳು ಆಪಾದಿಸಿದ್ದರು. 2010ರಲ್ಲಿ ಅಮೆರಿಕ ಅಧಿಕಾರಿಗಳು ಈತನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದರು.