ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ದೆಹಲಿ ಬ್ಲಾಸ್ಟ್: ಪಾಕಿಸ್ತಾನದಿಂದ ಚಿದಂಬರಂಗೆ ಶಹಬ್ಬಾಸ್‌ಗಿರಿ! (Delhi blast | Pakistan | P Chidambaram | International News in Kannada)
ದೆಹಲಿ ಬ್ಲಾಸ್ಟ್: ಪಾಕಿಸ್ತಾನದಿಂದ ಚಿದಂಬರಂಗೆ ಶಹಬ್ಬಾಸ್‌ಗಿರಿ!
ಇಸ್ಲಾಮಾಬಾದ್, ಶನಿವಾರ, 10 ಸೆಪ್ಟೆಂಬರ್ 2011( 10:12 IST )
ದೆಹಲಿ ಹೈಕೋರ್ಟ್ ಆವರಣದಲ್ಲಿ ಉಗ್ರರು ನಡೆಸಿದ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಭಾರತವು ಪಾಕಿಸ್ತಾನದತ್ತ ಬೊಟ್ಟು ಮಾಡದೇ ಇರುವುದನ್ನು ಪಾಕಿಸ್ತಾನ ಸರಕಾರವು ಮುಕ್ತ ಕಂಠದಿಂದ ಶ್ಲಾಘಿಸಿದೆ.
ಭಾರತದಲ್ಲಿ ಈ ಹಿಂದೆ ಉಗ್ರಗಾಮಿ ಸಂಘಟನೆಗಳು ನಡೆಸಿರುವ ವಿಧ್ವಂಸಕ ಕೃತ್ಯಗಳ ಹಿಂದೆ ಪಾಕ್ ಕೈವಾಡವಿದೆ ಎಂದು ಆಪಾದಿಸಲಾಗುತ್ತಿತ್ತು.
ಈ ಕುರಿತು ಹೇಳಿಕೆ ನೀಡಿರುವ ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ ತಹಮಿನಾ ಜನ್‌ಜುವಾ, ಭಾರತದ ಗೃಹ ಸಚಿವ ಪಿ. ಚಿದಂಬರಂ ಅವರು ದೆಹಲಿ ಸ್ಫೋಟದ ಕುರಿತು ಸಂಸತ್‌ನಲ್ಲಿ ಹೇಳಿಕೆ ನೀಡುವ ಸಂದರ್ಭದಲ್ಲಿ ದುಷ್ಕೃತ್ಯಗಳಿಗೆ ಪಾಕಿಸ್ತಾನವನ್ನು ಗುರಿ ಮಾಡದೇ ಅನುಸರಿಸಿದ ಪ್ರಬುದ್ಧ ನಡೆಯನ್ನು ನಾವು ಶ್ಲಾಘಿಸುತ್ತೇವೆ ಎಂದು ಹೇಳಿದ್ದಾರೆ.
ಈ ಕುರಿತು ಸಂಸತ್‌ನಲ್ಲಿ ಹೇಳಿಕೆ ನೀಡಿದ್ದ ಗೃಹ ಸಚಿವ ಚಿದಂಬರಂ, ಈ ದುಷ್ಕೃತ್ಯದ ಹಿಂದೆ ಯಾರ ಕೈವಾಡವಿದೆ ಎಂಬುದರ ಕುರಿತು ಮಾಹಿತಿ ಇಲ್ಲ ಎಂದು ತಿಳಿಸಿದ್ದರು.
ಬುಧವಾರ ದೆಹಲಿ ಹೈಕೋರ್ಟ್ ಆವರಣದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ 12 ಜನರು ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ದೆಹಲಿ ಬಾಂಬ್ ಸ್ಫೋಟಕ್ಕೆ ತಾನೆ ಹೊಣೆ ಎಂದು ಹರ್ಕತ್ ಉಲ್ ಜಿಹಾದ್ ಎ ಇಸ್ಲಾಂ ಉಗ್ರಗಾಮಿ ಸಂಘಟನೆ ಇ ಮೇಲ್ ರವಾನಿಸಿತ್ತು. ಈ ಕುರಿತು ವಿಚಾರಣೆ ನಡೆಸುವುದಾಗಿ ಭದ್ರತಾ ಪಡೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಬುಧವಾರ ಸಂಸತ್‌ನಲ್ಲಿ ಹೇಳಿಕೆ ನೀಡಿದ್ದ ಗೃಹ ಸಚಿವ ಚಿದಂಬರಂ ಈ ದುಷ್ಕೃತ್ಯಕ್ಕೆ ಕಾರಣರಾದವರನ್ನು ಈ ಹಂತದಲ್ಲಿ ಪತ್ತೆ ಹಚ್ಚಲು ಸಾಧ್ಯವಿಲ್ಲ ಎಂದು ಹೇಳಿದ್ದರಲ್ಲದೇ ಇದರ ಹಿಂದೆ ಇರುವವರನ್ನು ಪತ್ತೆ ಹಚ್ಚಿ ಅವರನ್ನು ಶಿಕ್ಷೆಗೊಳಪಡಿಸಲಾಗುವುದು ಎಂದು ತಿಳಿಸಿದ್ದರು.
ಕಾರಣ ತಿಳಿಯದೇ ಯಾರೋ ಒಬ್ಬರತ್ತ ಬೊಟ್ಟು ಮಾಡದ ಗೃಹ ಸಚಿವ ಪಿ.ಚಿದಂಬರಂ ಅವರ ಪ್ರಬುದ್ಧ ನಡೆಯನ್ನು ನಾವು ಶ್ಲಾಘಿಸುತ್ತೇವೆ ಎಂದು ಜನ್‌ಜುವಾ ತಿಳಿಸಿದ್ದಾರೆ.