ವಾಷಿಂಗ್ಟನ್, ಶನಿವಾರ, 10 ಸೆಪ್ಟೆಂಬರ್ 2011( 14:15 IST )
9/11ರಂದು ಅಮೆರಿಕದ ಮೇಲೆ ಉಗ್ರರು ದಾಳಿ ನಡೆಸಿ 10 ವರ್ಷ ಪೂರೈಸಲಿರುವ ಸಂದರ್ಭದಲ್ಲೇ ಮೂರು ಮಂದಿ ಉಗ್ರರು ನ್ಯೂಯಾರ್ಕ್ ನಗರದ ಮೇಲೆ ದಾಳಿ ನಡೆಸಲಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಶಂಕಿತ ಸಂಚುಕೋರರನ್ನು ಬೇಟೆಯಾಡಲು ಅಮೆರಿಕ ಭದ್ರತಾಪಡೆಗಳು ಮುಂದಾಗಿವೆ.
ನ್ಯೂಯಾರ್ಕ್ ಹಾಗೂ ವಾಷಿಂಗ್ಟನ್ ನಗರಗಳಲ್ಲಿ ದುಷ್ಕರ್ಮಿಗಳು ಸ್ಫೋಟಕಗಳನ್ನು ತುಂಬಿದ ವಾಹನಗಳ ಮೂಲಕ ದಾಳಿ ನಡೆಸಲಿದ್ದಾರೆ ಎಂದು ಖಚಿತ ವರದಿಗಳು ಬಂದಿರುವ ಹಿನ್ನೆಲೆಯಲ್ಲಿ ಭದ್ರತಾಪಡೆಯ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.
ಸ್ಫೋಟಕಗಳು ತುಂಬಿದ್ದ ಟ್ರಕ್ ಅಥವಾ ಕಾರಿನಲ್ಲಿ ದುಷ್ಕರ್ಮಿಗಳು ವಾಷಿಂಗ್ಟನ್‌ನಲ್ಲಿರುವ ಸೇತುವೆಗಳು, ಸುರಂಗಗಳ ಮೇಲೆ ದಾಳಿ ನಡೆಸಲಿದ್ದಾರೆ ಎಂದು ಮಾಧ್ಯಮ ವರದಿಯಿಂದ ಬಹಿರಂಗವಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ದುಷ್ಕೃತ್ಯ ನಡೆಸಲಿದ್ದಾರೆ ಎಂದು ಶಂಕಿಸಲಾಗಿರುವ ಮೂರು ಮಂದಿ ದುಷ್ಕರ್ಮಿಗಳ ವಿರುದ್ಧ ನಿಗಾ ವಹಿಸುವಂತೆ ಅಮೆರಿಕದ ಕಾನೂನು ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಮುನ್ನೆಚ್ಚರಿಕೆ ನೀಡಲಾಗಿತ್ತು ಎಂದು ನ್ಯೂಯಾರ್ಕ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ ವರದಿ ಮಾಡಿದೆ.
ದುಷ್ಕರ್ಮಿಗಳು ದಾಳಿ ನಡೆಸುವ ಕುರಿತು ಎಂದು ವಿಶ್ವಸನೀಯ ಮೂಲಗಳಿಂದ ತಿಳಿದು ಬಂದಿದೆ ಎಂದು ಹೇಳಿರುವ ಸರಕಾರದ ಕೆಲವು ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇದನ್ನು ಇನ್ನೂ ದೃಢೀಕರಿಸಲಾಗಿಲ್ಲ ಎಂದು ಹೇಳಿದ್ದಾರೆ.