ಅದೃಷ್ಟ ಯಾವ ಸಂದರ್ಭದಲ್ಲಿ ಹೇಗೆ ಬರುತ್ತದೆ ಎಂಬುದನ್ನು ಹೇಳಲಿಕ್ಕಾಗುವುದಿಲ್ಲ. ನಿನ್ನೆ ಮೊನ್ನೆಯವರೆಗೆ ಲಂಡನ್‌ನಲ್ಲಿ ಪಾಠಮಾಡುತ್ತಿದ್ದ ಸಾಮಾನ್ಯ ವ್ಯಕ್ತಿಯೊಬ್ಬ ಇಂದು ಸೋಮಾಲಿಯಾದ ಉಪ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಶಿಕ್ಷಕ ಇಬ್ರಾಹಿಂ ಅವರು ಬೇಸಿಗೆ ರಜೆಯ ನಂತರ ಕೆಲಸಕ್ಕೆ ಮರಳಿರಲಿಲ್ಲ. ಅವರು ಉಪ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿದ ಸಹೋದ್ಯೋಗಿಗಳು ಅಚ್ಚರಿಗೊಂಡಿದ್ದಾರೆ.
ಮಹಮದ್ ಇಬ್ರಾಹಿಂ ಉತ್ತರ ಲಂಡನ್‌ನ ಬ್ರೆಂಟ್‌ನಲ್ಲಿರುವ ನ್ಯೂಮಾನ್ ಕ್ಯಾಥೋಲಿಕ್ ಸ್ಕೂಲ್‌ನಲ್ಲಿ ಕಳೆದ ಎರಡು ವರ್ಷಗಳಿಂದ ಶಿಕ್ಷಕರಾಗಿದ್ದರು.
ಸೋಮಾಲಿಯಾದಲ್ಲಿ ಅಸ್ಥಿತ್ವಕ್ಕೆ ಬಂದಿರುವ ಮಧ್ಯಂತರ ಸರಕಾರದ ನೇತೃತ್ವ ವಹಿಸುವಂತೆ ಇಬ್ರಾಹಿಂ ಅವರಿಗೆ ಬುಲಾವ್ ಬಂದಿತ್ತು ಎಂದು ಡೈಲಿ ಮೇಲ್ ವರದಿ ಮಾಡಿದೆ.
ಇಬ್ರಾಹಿಂ ಅವರ ಹೆಸರನ್ನು ಗೂಗಲ್‌ನಲ್ಲಿ ಹುಡುಕಾಟ ನಡೆಸಿದಾಗ ಅವರು ಸೋಮಾಲಿಯಾದ ಉಪ ಪ್ರಧಾನಿಯಾಗಿ ನೇಮಕವಾಗಿರುವುದು ತಿಳಿದುಬಂದಿದೆ ಎಂದು ಮುಖ್ಯ ಶಿಕ್ಷಕ ರಿಚರ್ಡ್ ಕೊಲ್ಕಾ ಹೇಳಿದ್ದಾರೆ.
ಇಬ್ರಾಹಿಂ ಅವರ ಸಹೋದ್ಯೋಗಿಗಳು ಸೋಮಾಲಿಯಾ ಸರಕಾರದ ದಾಖಲೆಯಲ್ಲಿ ಅವರ ಹೆಸರಿರುವುದನ್ನು ಪತ್ತೆ ಮಾಡಿದ್ದಾರೆ. ಶಾಲೆಗೆ ಬರದೇ ಇರುವುದರ ಕುರಿತು ಸೋಮಾಲಿಯಾದ ಸಹೋದ್ಯೋಗಿಯಿಂದ ತಿಳಿಯಿತು. ಅವರು ಸೋಮಾಲಿಯಾದಲ್ಲಿ ಪ್ರಮುಖ ರಾಜಕೀಯ ಹುದ್ದೆಯನ್ನು ಅಲಂಕರಿಸಿದ್ದಾರೆ ಎಂದು ಇಂಟರ್ನೆಟ್ ಮೂಲಕ ತಿಳಿಯಿತು ಎಂದು ಕೋಲ್ಕಾ ತಿಳಿಸಿದ್ದಾರೆ.
ಇಬ್ರಾಹಿಂ ಅವರು ಉಪ ಪ್ರಧಾನಿಯಾಗಿದ್ದಾರೆ ಎಂಬ ಸುದ್ದಿ ತಿಳಿದ ನಂತರ ನಾನು ಏಪ್ರಿಲ್ ಫೂಲ್ ಆಗಿದ್ದೇನೆಯೇ ಎಂದು ತಿಳಿಯುವ ನಿಟ್ಟಿನಲ್ಲಿ ಕ್ಯಾಲೆಂಡರ್ ನೋಡಿದೆ ಎಂದು ಕೋಲ್ಕಾ ತಿಳಿಸಿದ್ದಾರೆ.
ಆ ನಂತರ ಮುಖ್ಯ ಶಿಕ್ಷಕ ಕೋಲ್ಕಾ ಅವರನ್ನು ಸಂಪರ್ಕಿಸಿದ ಇಬ್ರಾಹಿಂ, ತಾವು ಸೋಮಾಲಿಯಾದ ಉಪ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿರುವುದರಿಂದ ಕೆಲಸಕ್ಕೆ ಮರಳುವುದಿಲ್ಲ ಎಂದು ತಿಳಿಸಿದ್ದರು. ಈ ಸುದ್ದಿ ತಿಳಿದ ನಂತರ ನಾನು ಅವರನ್ನು ಅಭಿನಂದಿಸಿದ್ದೆ ಎಂದು ಕೋಲ್ಕಾ ತಿಳಿಸಿದ್ದಾರೆ.
ಕಳೆದ 60 ವರ್ಷಗಳಿಂದ ಸೋಮಾಲಿಯಾ ದಂಗೆ, ಕಳ್ಳತನದಂತಹಾ ದುಷ್ಕೃತ್ಯಗಳಿಂದ ಬಳಲುತ್ತಿದ್ದು, ಗಾಯದಮೇಲೆ ಬರೆ ಎಳೆದಂತೆ ಬರಗಾಲವೂ ದೇಶದ ಪರಿಸ್ಥಿತಿ ವಿಷಮಗೊಳ್ಳಲು ಕಾರಣವಾಗಿದೆ.