ನ್ಯೂಯಾರ್ಕ್, ಭಾನುವಾರ, 11 ಸೆಪ್ಟೆಂಬರ್ 2011( 16:56 IST )
ಅಮೆರಿಕಾದ ವಿಶ್ವ ವಾಣಿಜ್ಯ ಕೇಂದ್ರಕ್ಕೆ ಉಗ್ರರ ದಾಳಿ ನಡೆದು ಇಂದಿಗೆ (ಭಾನುವಾರ) ಹತ್ತು ವರ್ಷಗಳೇ ಸಂದಿವೆ. ಹೀಗಿದ್ದರೂ ಅಂದಿನ ಕರಾಳ ದಿನದ ನೆನಪು ಮಾಸದೇ ಇನ್ನೂ ಅಚ್ಚಳಿಯದೇ ಉಳಿದಿದೆ.
ಈ ಸಂದರ್ಭದಲ್ಲಿ ಉಗ್ರರ ಕ್ರೂರ ಕೃತ್ಯಕ್ಕೆ ಬಲಿಯಾದವರನ್ನು ಸ್ಮರಿಸಿಕೊಂಡು ಮಾತನಾಡಿದ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ, ಅಮೆರಿಕಾ ಯಾವತ್ತೂ ಇಸ್ಲಾಂ ವಿರುದ್ಧ ಯುದ್ಧ ನಡೆಸಿಲ್ಲ, ಮಾಡುವುದು ಇಲ್ಲ ಎಂದಿದ್ದಾರೆ. ಬದಲಾಗಿ ಇಡೀ ವಿಶ್ವವೇ ಅಲ್-ಖೈದಾ ವಿರುದ್ಧ ಕಾರ್ಯಾಚರಣೆಗೆ ಒಗ್ಗಟ್ಟಾಗಿದ್ದವು ಎಂದರು.
ಅಲ್-ಖೈದಾ ಭಯೋತ್ಪಾದನೆ ಸಂಘಟನೆಯು ವಿಶ್ವದ್ಯಾಂತ ನಡೆಸಿರುವ ಹಲವು ದಾಳಿಗಳಲ್ಲಿ ಸಾವಿರಾರು ಮಂದಿ ಪ್ರಾಣ ಕಳೆದುಕೊಳ್ಳುವಂತಾಗಿತ್ತು. ಅವರಲ್ಲಿ ಮಕ್ಕಳು, ಪುರುಷರು ಮಹಿಳೆಯರೆನ್ನದೇ ಬಹುತೇಕ ಮಂದಿ ಮುಸ್ಲಿಂನವರೇ ಆಗಿದ್ದರು. ಈ ಸಂದರ್ಭದಲ್ಲಿ ಎಲ್ಲರನ್ನು ಸ್ಮರಿಸ ಬಯಸುತ್ತೇವೆ ಎಂದಿದ್ದಾರೆ.
2001 ಸೆಪ್ಟೆಂಬರ್ 11ರಂದು ವಲ್ಡ್ ಟ್ರೆಂಡ್ ಸೆಂಟರ್‌ಗೆ ಅಲ್-ಖೈದಾ ದಾಳಿ ನಡೆಸಿತ್ತು. ಆನಂತರ ಸ್ಫೋಟದ ರೂವಾರಿ ಅಲ್-ಖೈದಾ ವರಿಷ್ಠ ಉಸಾಮಾ ಬಿನ್ ಲಾಡೆನ್‌ರನ್ನು ಪಾಕಿಸ್ತಾನದ ಅಬೊಟಾಬಾದ್‌ನಲ್ಲಿ ಅಮೆರಿಕಾ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಬಲಿಯಾಗಿದ್ದರು.
ಅದು ಇಡೀ ವಿಶ್ವದ ಮೇಲೆ ನಡೆದ ದಾಳಿ. ನಾವು ಹಂಚಿಕೊಳ್ಳುವ ಮಾನವೀಯತೆ ಮೇಲೆ ನಡೆದ ದಾಳಿಯಾಗಿತ್ತು. ಅಂದು ನಡೆದ ದಾಳಿಯಲ್ಲಿ 90 ರಾಷ್ಟ್ರಗಳ 3000ರಷ್ಟು ಮಂದಿ ಮೃತಪಟ್ಟಿದ್ದರು. ಘಟನೆಯ ನಂತರ ಅಂತರಾಷ್ಟ್ರೀಯ ಸಮುದಾಯ ಒಂದಾಗಿತ್ತು ಎಂದು ಒಬಾಮಾ ನೆನೆಪಿಸಿಕೊಂಡರು.