ವಾಷಿಂಗ್ಟನ್, ಸೋಮವಾರ, 12 ಸೆಪ್ಟೆಂಬರ್ 2011( 16:13 IST )
ಅಮೆರಿಕದ ಮೇಲೆ ನಡೆದ 9/11ರ ದಾಳಿಯಲ್ಲಿ ನಮ್ಮ ಸಂಘಟನೆ ಯಾವುದೇ ಪಾತ್ರ ವಹಿಸಿಲ್ಲ ಎಂದು ಹೇಳಿರುವ ತಾಲಿಬಾನ್ ಉಗ್ರಗಾಮಿ ಸಂಘಟನೆ, 9/11ರ ದಾಳಿಯ ಘಟನೆಯನ್ನೇ ಆಧಾರವಾಗಿರಿಸಿಕೊಂಡು ಅಫ್ಘಾನಿಸ್ತಾನದ ಮೇಲೆ ದಾಳಿ ನಡೆಸಿದ ಅಮೆರಿಕ ಹತ್ತಾರು ಸಾವಿರ ಮುಗ್ದ ಅಫ್ಘಾನ್ ನಾಗರಿಕರನ್ನು ಹತ್ಯೆ ಮಾಡಿದೆ ಎಂದು ಆಪಾದಿಸಿದೆ.
ಸೆಪ್ಟೆಂಬರ್ 11ರ ದಾಳಿಯನ್ನೇ ನೆಪವಾಗಿರಿಸಿಕೊಂಡು ಅಫ್ಘಾನಿಸ್ತಾನದ ಮೇಲೆ ದಾಳಿ ನಡೆಸಿದ ಅಮೆರಿಕ ಕುಂಟು ನೆಪ ಹೇಳುತ್ತಿದೆ ಎಂದು ಆಪಾದಿಸಿರುವ ತಾಲಿಬಾನ್, ಸಾವಿರಾರು ಅಫ್ಘಾನ್ ನಾಗರಿಕರ ಕೊಲೆಗೆ ಅಂತಾರಾಷ್ಟ್ರೀಯ ಸಮುದಾಯವೇ ಹೊಣೆಯಾಗುತ್ತದೆ ಎಂದು ತಾಲಿಬಾನ್ ಆಪಾದಿಸಿದೆ.
9/11ರ ದಾಳಿ ನಡೆದು 10 ವರ್ಷಗಳು ಕಳೆದಿರುವ ಹಿನ್ನೆಲೆಯಲ್ಲಿ ಮತ್ತೆ ಅದೇ ರೀತಿಯ ದಾಳಿಗಳು ನಡೆಯಬಹುದು ಎಂದು ಅಮೆರಿಕ ಅಧಿಕಾರಿಗಳು ಎಚ್ಚರಿಕೆ ನೀಡಿದ್ದ ಹಿನ್ನೆಲೆಯಲ್ಲಿ ತಾಲಿಬಾನ್ ಈ ಹೇಳಿಕೆ ನೀಡಿದೆ.
ಸೆಪ್ಟೆಂಬರ್ 11ರಂದು ಅಮೆರಿಕದ ಮೇಲೆ ನಡೆದ ದಾಳಿಯಲ್ಲಿ ತಮ್ಮ ಪಾತ್ರವಿಲ್ಲ ಎಂದು ಪ್ರತಿವರ್ಷ ಅಫ್ಘಾನಿಸ್ತಾನದ ಜನರು ನೆನಪಿಸಿಕೊಳ್ಳುತ್ತಾರೆ. ಅಮೆರಿಕದ ವಸಾಹತುಶಾಹಿ ನೀತಿಯಿಂದಾಗಿ ಹತ್ತಾರು ಸಾವಿರ ಮುಗ್ದ ಅಫ್ಘಾನ್ ನಾಗರಿಕರು ತಮ್ಮ ಪ್ರಾಣ ಕಳೆದುಕೊಳ್ಳಬೇಕಾಯಿತು ಎಂದು ತಾಲಿಬಾನ್ ಆಪಾದಿಸಿದೆ.
ಅಫ್ಘಾನಿಸ್ತಾನದಲ್ಲಿ ಹಲವಾರು ವರ್ಷಗಳಿಂದ ಯುದ್ಧ ನಡೆಯುತ್ತಿದ್ದರೂ ಅಫ್ಘಾನಿಸ್ತಾನದ ಜನರು ಸಹನೆ ಕಳೆದುಕೊಂಡಿಲ್ಲ. ಅಫ್ಘಾನಿಸ್ತಾನವನ್ನು ಸಶಕ್ತ ರಾಷ್ಟ್ರವನ್ನಾಗಿ ನಿರ್ಮಾಣ ಮಾಡುವ ಮೂಲಕ ಅಮೆರಿಕನ್ನರನ್ನು ಇತಿಹಾಸದ ಕಸದಬುಟ್ಟಿಗೆ ಕಳುಹಿಸುತ್ತಾರೆ ಎಂದು ತಾಲಿಬಾನ್ ಹೇಳಿದೆ.