ವಾಷಿಂಗ್ಟನ್, ಮಂಗಳವಾರ, 13 ಸೆಪ್ಟೆಂಬರ್ 2011( 20:48 IST )
ಅಮೆರಿಕದ ಮೇಲೆ 9/11 ದಾಳಿ ನಡೆದು 10 ವರ್ಷ ಪೂರೈಸಿರುವ ಸಂದರ್ಭದಲ್ಲೇ ಅಲ್‌ಖೈದಾ ಉಗ್ರಗಾಮಿ ಸಂಘಟನೆ ಜಿಹಾದ್ ವೆಬ್‌ಸೈಟ್‌ಗಳಲ್ಲಿ 9/11 ದಾಳಿಯ ಒಂದು ಗಂಟೆ ಕಾಲಾವಧಿಯ ವೀಡಿಯೋ ಬಿಡುಗಡೆ ಮಾಡಿದೆ ಎಂದು ಖಾಸಗಿ ಬೇಹುಗಾರಿಕಾ ಸಂಸ್ಥೆ ತಿಳಿಸಿದೆ.
ಅಲ್‌ಖೈದಾದ ಹೊಸ ನಾಯಕ ಐಮನ್ ಅಲ್ ಜವಾಹಿರಿ ಅವರ ಭಾಷಣ ಹಾಗೂ ಮಾಜಿ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಅವರು ಇರುವ ವೀಡಿಯೋ ದೃಶ್ಯಾವಳಿಗೆ ದಿ ಡಾನ್ ಆಫ್ ಇಮಿನೆಂಟ್ ವಿಕ್ಟರಿ ಎಂಬ ತಲೆಬರಹ ನೀಡಲಾಗಿದೆ. ಸೋಮವಾರ ಜಿಹಾದಿ ವೆಬ್‌ಸೈಟ್‌ಗಳಿಗೆ ಬಿಡುಗಡೆ ಮಾಡಿರುವ ವೀಡಿಯೋದಲ್ಲಿ ಐಮನ್ ಅಲ್ ಜವಾಹಿರಿಯ ಫೋಟೋ ಕೂಡಾ ಇದೆ.
ಅಮೆರಿಕದ ಸೀಲ್ ಕಮಾಂಡೋ ಪಡೆಗಳು ಪಾಕಿಸ್ತಾನದ ಅಬೋಟಾಬಾದ್‌ನಲ್ಲಿ ಅಲ್‌ಖೈದಾ ಮುಖಂಡ ಒಸಾಮಾ ಬಿನ್ ಲಾಡೆನ್‌ನನ್ನು ಹತ್ಯೆ ಮಾಡಿದ ನಂತರ ಈಗಿನ ಅಲ್ ಖೈದಾ ಮುಖಂಡ ಐಮನ್ ಅಲ್ ಜವಾಹಿರಿ ತಮ್ಮ ಹಿಟ್‌ಲಿಸ್ಟ್‌ನಲ್ಲಿದ್ದಾನೆ ಎಂದು ಅಮೆರಿಕ ಬೇಹುಗಾರಿಕೆ ಅಧಿಕಾರಿಗಳು ತಿಳಿಸಿದ್ದಾರೆ.
9/11 ದಾಳಿಯ ದಶಮಾನೋತ್ಸವದ ಸಂದರ್ಭದಲ್ಲಿ ಉಗ್ರಗಾಮಿಗಳು ವಾಷಿಂಗ್ಟನ್ ಮತ್ತು ನ್ಯೂಯಾರ್ಕ್ ಮೇಲೆ ದಾಳಿ ನಡೆಸುವ ಬಗ್ಗೆ ಮಾಹಿತಿ ದೊರೆತಿದ್ದ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದರು.