ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಗಡಾಫಿ ಟಾರ್ಗೆಟ್; ನ್ಯಾಟೋಗೆ ಮಾಹಿತಿ ಕೊಟ್ಟಿದ್ದು ಮಹಿಳೆ (Libya | NATO | Gaddafi | Nomidia | Latest International News in Kannada)
ಗಡಾಫಿ ಟಾರ್ಗೆಟ್; ನ್ಯಾಟೋಗೆ ಮಾಹಿತಿ ಕೊಟ್ಟಿದ್ದು ಮಹಿಳೆ
ಟ್ರಿಪೋಲಿ, ಬುಧವಾರ, 14 ಸೆಪ್ಟೆಂಬರ್ 2011( 09:34 IST )
ಲಿಬಿಯಾದ ನಿರಂಕುಶ ಪ್ರಭು ಮುಅಮ್ಮರ್ ಗಡಾಫಿಯ 42 ವರ್ಷಗಳ ದುರಾಡಳಿತಕ್ಕೆ ನ್ಯಾಟೋ ಪಡೆಗಳು ಬಾಂಬ್ ದಾಳಿಯ ಮೂಲಕ ಅಂತ್ಯ ಹಾಡಲು ಸಹಕರಿಸಿದ್ದು 24 ವರ್ಷದ ಒಬ್ಬ ಮಹಿಳೆ. ಗಡಾಫಿಯ ಸೇನಾ ಪಡೆಯ ಜೊತೆಗಿದ್ದುಕೊಂಡೇ ಅಲ್ಲಿನ ರಹಸ್ಯ ಮಾಹಿತಿಗಳನ್ನು ಆಕೆ ನ್ಯಾಟೋ ಪಡೆಗೆ ನೀಡಿರುವ ಅಂಶ ಇದೀಗ ಬಹಿರಂಗವಾಗಿದೆ.
ನೊಮಿಡಿಯಾ ಎಂಬ ರಹಸ್ಯ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆ ಪದೇ, ಪದೇ ತಾನಿರುವ ಸ್ಥಳವನ್ನು ಬದಲಿಸುತ್ತಿದ್ದು, ರಹಸ್ಯ ಮಾಹಿತಿ ರವಾನೆಗೆ ಎರಡು ಮೊಬೈಲ್ ಸಿಮ್‌ಗಳನ್ನು ಬಳಸುತ್ತಿದ್ದಳು ಈ ವಿಷಯ ಆಕೆಯ ಕುಟುಂಬದ ಸದಸ್ಯರಿಗೂ ತಿಳಿದಿರಲಿಲ್ಲ ಎನ್ನಲಾಗಿದೆ.
ತಾನು ಮಹಿಳೆಯಾಗಿರುವುದರಿಂದ ತನ್ನ ಮೇಲೆ ಮುಅಮ್ಮರ್ ಗಡಾಫಿ ಅವರ ಸೇನಾಪಡೆಗೆ ಅನುಮಾನ ಬಂದಿರಲಿಲ್ಲ ಎಂದು ಆಕೆ ತಿಳಿಸಿದ್ದಾರೆ.
ಬಂಡುಕೋರ ಪಡೆಗಳು ಗಡಾಫಿಯ 42 ವರ್ಷಗಳ ಆಡಳಿತವನ್ನು ಅಂತ್ಯಗೊಳಿಸಿದ ನಂತರ ಲಿಬಿಯಾ ರಾಜಧಾನಿ ಟ್ರಿಪೋಲಿಯ ಹೋಟೆಲೊಂದರಲ್ಲಿ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಆಕೆ ಈ ವಿಷಯವನ್ನು ಬಹಿರಂಗಪಡಿಸಿದ್ದಾಳೆ.
ಮುಅಮ್ಮರ್ ಗಡಾಫಿ ಪಡೆಗಳು ಯುವಕರನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದು, ಮಹಿಳೆಯೊಬ್ಬಳು ಗೂಢಚಾರಿಕೆ ನಡೆಸುತ್ತಿರುವ ಬಗ್ಗೆ ಅವರು ಚಿಂತಿಸಲು ಸಾಧ್ಯವೇ ಇರಲಿಲ್ಲ ಎಂದು ಹೇಳಿದ್ದಾರೆ.